ತಾಯಿಯನ್ನು ಬದುಕಿಸದಿದ್ದರೆ ಬಿಜೆಪಿಗೆ ಶಾಪ : ಮೋದಿ ಮೇಲೆ ವಾಗ್ದಾಳಿ
ನವದೆಹಲಿ, ಜುಲೈ 20 : ಇಡೀ ಅವಿಶ್ವಾಸ ನಿರ್ಣಯದ ಕರ್ತೃವಾಗಿರುವ ತೆಲುಗು ದೇಶಂ ಪಕ್ಷದ ಜಯದೇವ್ ಗಲ್ಲಾ ಅವರು, ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ, ಮೊದಲ ಬಾರಿ ಸಂಸದರಾಗಿರುವ ಜಯದೇವ್ ಗಲ್ಲಾ ಅವರು, ಅವಿಶ್ವಾಸ ಗೊತ್ತುವಳಿ ಮಂಡಿಸಲು ನಾಲ್ಕು ಕಾರಣಗಳನ್ನು ನೀಡಿ, ಇದು ಕೇಂದ್ರ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಧರ್ಮಯುದ್ಧ ಎಂದು ಮೊದಲು ಕಹಳೆ ಊದಿದರು. ಟಿಡಿಪಿಯ ಸಂಸದ ಕೆ ಶ್ರೀನಿವಾಸ್ ಅವರ ಪರವಾಗಿ ಜಯದೇವ್ ಅವಿಶ್ವಾಸ ಗೊತ್ತುವಳಿ ಮಂಡಿಸಿದರು.
"ನೀವು ವಿಭಿನ್ನ ರಾಗವನ್ನು ಹಾಡುತ್ತಿದ್ದೀರಿ. ನೀವೇನು ಮಾಡುತ್ತಿದ್ದೀರೆಂದು ಆಂಧ್ರಪ್ರದೇಶದ ಜನತೆ ಗಮನಿಸುತ್ತಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಆಂಧ್ರ ಪ್ರದೇಶದಲ್ಲಿ ಟೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿ ತಕ್ಕ ಪಾಠ ಕಲಿಸಲಿದ್ದಾರೆ. ಜನರಿಗೆ ಮೋಸವಾದರೆ ಹಿಂದೆ ಕಾಂಗ್ರೆಸ್ಸನ್ನು ನಿರ್ನಾಮ ಮಾಡಿದ ಹಾಗೆ ಬಿಜೆಪಿಯನ್ನೂ ನಿರ್ನಾಮ ಮಾಡಲಿದ್ದಾರೆ. ಇದು ನಾವು ನೀಡುತ್ತಿರುವ ಎಚ್ಚರಿಕೆಯಲ್ಲ, ಜನರ ಶಾಪ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ, "ಕಾಂಗ್ರೆಸ್ ತಾಯಿಯನ್ನು ಕೊಂದಿದೆ, ಮಗುವನ್ನು ಬದುಕಿಸಿದೆ. ನಾನೇನಾದರೂ ಇದ್ದಿದ್ದರೆ ತಾಯಿಯನ್ನೂ ಬದುಕಿಸುತ್ತಿದ್ದೆ" ಎಂದು ನರೇಂದ್ರ ಮೋದಿಯವರು ಹೇಳಿದ್ದರು. ಕಳೆದ ನಾಲ್ಕು ವರ್ಷಗಳಿಂದ ತಾಯಿಯನ್ನು ಮೋದಿಯವರು ಉಳಿಸುತ್ತಾರಾ ಎಂದು ಆಂಧ್ರ ಪ್ರದೇಶದ ಜನರು ಇನ್ನೂ ಕಾಯುತ್ತಿದ್ದಾರೆ ಎಂದು ಶುಕ್ರವಾರ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಬಳ್ಳಾರಿಯ ಕಳಂಕಿತ ರಾಜಕಾರಣಿ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿ ಪರೋಕ್ಷ ಬೆಂಬಲ ನೀಡಿದೆ. ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಣದಿಂದ ಗೆಲ್ಲಿಸುವ ಮೂಲಕ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಮೂಲಕ ಭ್ರಷ್ಟಾಚಾರಕ್ಕೆ ಮೋದಿ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಜಯದೇವ್ ಗಲ್ಲಾ ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಭಾಷಣದ ಕೊನೆಯ ಹಂತದಲ್ಲಿ ನರೇಂದ್ರ ಮೋದಿಯವರನ್ನು 'ಮೋಸಗಾಡು' (ಮೋಸಗಾರ) ಎಂದು ಜಯದೇವ್ ಗಲ್ಲಾ ಅವರು ಕರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾತನ್ನು ಸಂಸತ್ತಿನ ಕಲಾಪದ ಕಡತದಿಂದ ತೆಗೆದುಹಾಕಬೇಕು ಎಂದು ನಿರ್ಮಲಾ ಸೀತಾರಾಮನ್ ಅವರು ಆಗ್ರಹಿಸಿದರು.












Click it and Unblock the Notifications