ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ, ಹಳಿ ತಪ್ಪಿದ 5 ಬೋಗಿಗಳು
ಬಾರ್ಗರ್, ಜೂನ್ 5: ಓಡಿಶಾದಲ್ಲಿ ಮೂರು ರೈಲುಗಳ ನಡುವೆ ಏರ್ಪಟ್ಟ ಅಪಘಾತದ ನೆನೆಪು ಮಾಸುವ ಮುನ್ನವೇ ಇದೇ ಓಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ನಡೆದಿದೆ. ಘಟನೆಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ರೈಲಿನ 5 ಬೋಗಿಗಳು ನೆಲಕ್ಕುರುಳಿವೆ ಎಂದು ತಿಳಿದು ಬಂದಿದೆ.

ಓಡಿಶಾದ ಬಾರ್ಗರ್‌ನಲ್ಲಿ ಚಲಿಸುತ್ತಿದ್ದ ಗೂಡ್ಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದು ಬಂದಿದೆ. ಈ ರೈಲಿನಲ್ಲಿ ಸುಣ್ಣದ ಕಲ್ಲು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಗೂಡ್ಸ್ ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಯಾವುದೇ ಹಾನಿಯಾಗಿಲ್ಲವಾದರೂ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಿರಿಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮಾಹಿತಿಯ ಪ್ರಕಾರ, ಅದು ಸುಣ್ಣದ ಕಲ್ಲುಗಳನ್ನು ಹೊತ್ತೊಯ್ಯುತ್ತಿತ್ತು. ಅದರ ಐದು ಬೋಗಿಗಳು ಬಾರ್ಗರ್ ಬಳಿ ಹಳಿತಪ್ಪಿದವು. ಕೂಡಲೇ ಚಾಲಕ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಘಟನೆಯ ನಂತರ ಆ ಮಾರ್ಗದ ರೈಲುಗಳನ್ನು ನಿಲ್ಲಿಸಲಾಯಿತು. ಸದ್ಯ ರೈಲನ್ನು ಹಳಿಗೆ ತರಲು ಪ್ರಯತ್ನ ಆರಂಭಿಸಲಾಗಿದೆ.
ಮೂಲಗಳು ಪ್ರಕಾರ, ಭಾರತೀಯ ರೈಲ್ವೆಗೆ ಸಂಬಂಧಿಸಿಲ್ಲ, ಬದಲಾಗಿ ಇದು ಖಾಸಗಿ ಕಂಪೆನಿಗೆ ಸೇರಿದ ರೈಲಾಗಿತ್ತು. ಈ ಟ್ರ್ಯಾಕ್ ಕೂಡ ಖಾಸಗಿ ಕಂಪನಿಗೆ ಸೇರಿದೆ ಎನ್ನಲಾಗಿದೆ. ಭಾರತೀಯ ರೈಲ್ವೆ ವಕ್ತಾರರೊಬ್ಬರು, ಈ ರೈಲು ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವುದಿಲ್ಲ ಎಂದು ಹೇಳಿದರು.
ಡುಂಗ್ರಿ ಸುಣ್ಣದ ಗಣಿಗಳು ಮತ್ತು ಬರ್ಗಢ್‌ನಲ್ಲಿರುವ ಎಸಿಸಿಯ ಸಿಮೆಂಟ್ ಸ್ಥಾವರದ ನಡುವೆ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಿದೆ. ಇಲ್ಲಿ ಲೈನ್, ವ್ಯಾಗನ್‌ಗಳು ಮತ್ತು ಲೊಕೊಮೊಟಿವ್ ಎಲ್ಲವೂ ಖಾಸಗಿಯಾಗಿದ್ದು, ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರುವುದಿಲ್ಲ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಕೆಲವು ಬೋಗಿಗಳು ಮಾತ್ರ ಹಳಿತಪ್ಪಿವೆ ಎಂದು ಮೂಲಗಳು ತಿಳಿಸಿವೆ












Click it and Unblock the Notifications