ಶ್ರೀಶೈಲ ಕ್ಷೇತ್ರದ ಜಾತ್ರೆ: ಸೇವೆಗಳು, ವಿಶೇಷ ಬಸ್ ಸೌಲಭ್ಯ ಮಾಹಿತಿ
ಬೆಂಗಳೂರು, ಫೆಬ್ರವರಿ 27; ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಮಹಾ ಕ್ಷೇತ್ರದಲ್ಲಿ ಮಾರ್ಚ್ 1 ರಿಂದ 11, 2024ರ ತನಕ ಮಹಾಶಿವರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ದೇವಾಲಯದ ಸೇವೆಗಳು, ಬಸ್ ವ್ಯವಸ್ಥೆ ಬಗ್ಗೆ ಭಕ್ತರಿಗೆ ಮಾಹಿತಿ ನೀಡಲಾಗಿದೆ.
ಶ್ರೀಶೈಲ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ. ಪೆದ್ದಿರಾಜು ಪ್ರಕಟಣೆ ಮೂಲಕ ಭಕ್ತರಿಗೆ ಮಾಹಿತಿ ನೀಡಿದ್ದಾರೆ. ಈ ದೇವಾಲಯಕ್ಕೆ ಆಂಧ್ರ ಪ್ರದೇಶ ಮಾತ್ರವಲ್ಲ ಕರ್ನಾಟಕದಲ್ಲಿಯೂ ಅಪಾರ ಭಕ್ತರು ಇದ್ದಾರೆ. ಶಿವರಾತ್ರಿ ಸಮಯದಲ್ಲಿ ಸಾವಿರಾರು ಭಕ್ತರು ರಾಜ್ಯದಿಂದ ದೇವರ ದರ್ಶನಕ್ಕಾಗಿ ಸಾಗುತ್ತಾರೆ.

ಜಾತ್ರೆ ಮತ್ತು ಉತ್ಸವದ ಸಂದರ್ಭದಲ್ಲಿನ ಪರಿಸ್ಥಿತಿ ನಿರ್ವಹಣೆಗಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ಬ್ರಹ್ಮೋತ್ಸವದಲ್ಲಿ ಭಕ್ತರ ಜನದಟ್ಟಣೆಯ ನಿಯಂತ್ರಿಸುವ ಉದ್ದೇಶದಿಂದ ಭಕ್ತರಿಗೆ ಸ್ವಾಮಿಯ ಅಲಂಕಾರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ದರ್ಶನದ ವಿವರಗಳು: ಭಕ್ತಾದಿಗಳಿಗೆ ಉಚಿತ ದರ್ಶನ ಸೌಲಭ್ಯವಿದೆ. ಶೀಘ್ರ ದರ್ಶನಕ್ಕಾಗಿ ರೂ.200, ಅತಿ ಶೀಘ್ರ ದರ್ಶನಕ್ಕಾಗಿ ರೂ.500 ಪಾವತಿಸಬೇಕಾಗುತ್ತದೆ. ಈ ಟಿಕಟ್‍ಗಳನ್ನು ದೇವಾಲಯದ ವೆಬ್‍ಸೈಟ್ www.srisailadevasthanam.org ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ದೇವಾಲಯದ ಕರೆಂಟ್ ಬುಕ್ಕಿಂಗ್ ಮೂಲಕ ತಕ್ಷಣವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬ್ರಹ್ಮೋತ್ಸವದ ಪ್ರಾರಂಭದ 5 ದಿನಗಳು ಅಂದರೆ ಮಾರ್ಚ್ 1 ರಿಂದ 5 ರವರೆಗೆ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಮಾತ್ರ ಹಂತ ಹಂತವಾಗಿ ನಿರ್ದಿಷ್ಟ ಸಮಯದಲ್ಲಿ ಸ್ವಾಮಿಯ ಉಚಿತ ಸ್ಪರ್ಶ್ ದರ್ಶನವನ್ನು ಕಲ್ಪಿಸಲಾಗುತ್ತದೆ.
ಬ್ರಹ್ಮೋತ್ಸವ ಮುಗಿಯುವವರೆಗೂ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಕುರಿತು ಮಾಹಿತಿ ತಿಳಿದು ಭೇಟಿ ನೀಡಬಹುದು.
ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆಯು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಿಂದ ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ಕಾಲ್ನೆಡಿಗೆ ಮೂಲಕವೂ ಸಹ ಭಕ್ತರು ದೇವರ ದರ್ಶನಕ್ಕಾಗಿ ಹೋಗುತ್ತಾರೆ.
ಶ್ರೀಶೈಲ ಮಹಾಕ್ಷೇತ್ರದಲ್ಲಿ ಮಾರ್ಚ್ 1 ರಿಂದ 11ರ ವರೆಗೆ ಮಹಾಶಿವರಾತ್ರಿ ಬ್ರಹೋತ್ಸವ ಅಂಗವಾಗಿ ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಕರ್ನಾಟಕದಿಂದ ಸಾಗುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.
ಬ್ರಹೋತ್ಸವದದ ಸಂದರ್ಭದಲ್ಲಿ ದರ್ಶನ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಮಾರ್ಚ್ 5ರಂದು ರಾತ್ರಿ 7.30 ರಿಂದ 11/03/2024 ರಾತ್ರಿಯವರೆಗೆ ಭಕ್ತರೆಲ್ಲರಿಗೂ ಶ್ರೀ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಭಕ್ತರಿಗೆ ಮಾಹಿತಿ ನೀಡಲಾಗಿದೆ.
ಶ್ರೀಶೈಲ ಮಲಿಕಾರ್ಜುನ ಸ್ವಾಮಿ ದೇವಾಲಯ ಜ್ಯೋತಿರ್ಲಿಂಗಕ್ಕೆ ನೆಲೆಯಾಗಿದೆ ಮತ್ತು ಪಾರ್ವತಿ ದೇವಿಯ 18 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಕೃಷ್ಣಾ ನದಿಯ ದಡದಲ್ಲಿರುವ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಇದ್ದಾರೆ. ಜಾತ್ರೆಯ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.












Click it and Unblock the Notifications