ಅಂಕಿತಾ ಭಂಡಾರಿ ಹತ್ಯೆ: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 27: ಉತ್ತರಾಖಂಡದಲ್ಲಿ ಹತ್ಯೆಗೀಡಾದ 19 ವರ್ಷದ ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಅವರು ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಲು ನಿರಾಕರಿಸಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಪ್ರಮುಖ ಆರೋಪಿಯಾಗಿದ್ದಾನೆ. ಅಂಕಿತಾ ಹತ್ಯೆಯ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ತನ್ನ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುವ ದೇಶವು ಅವನತಿ ಹೊಂದುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವು ತನ್ನ ಮಹಿಳೆಯರನ್ನು ವಸ್ತುಗಳಂತೆ ಮತ್ತು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತದೆ. ಇದು ಅತ್ಯಂತ ಅಸಹ್ಯಕರ ಮತ್ತು ನಾಚಿಕೆಗೇಡಿನ ಉದಾಹರಣೆ. ನಾನು ಉತ್ತರಾಖಂಡದಲ್ಲಿ ಏನಾಯಿತು ಎಂಬುದರ ಕುರಿತು ಮಾತನಾಡುತ್ತಿದ್ದೇನೆ ಎಂದರು.
"ಹೊಟೇಲ್ ನಡೆಸುತ್ತಿದ್ದ ಬಿಜೆಪಿ ನಾಯಕ ಪುಲ್ಕಿತ್ ಆರ್ಯ ತಮ್ಮ ಹೋಟೆಲ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ವೇಶ್ಯೆಯಾಗುವಂತೆ ಒತ್ತಾಯಿಸುತ್ತಿದ್ದರು. ನಾನು ವೇಶ್ಯೆಯಾಗಲು ನಿರಾಕರಿಸುತ್ತೇನೆ ಎಂದು ಆಕೆಯ ವಾಟ್ಸಾಪ್‌ನಲ್ಲಿ ಸಂದೇಶಗಳಿವೆ. ಯುವತಿ ವೇಶ್ಯಾವಾಟಿಕೆ ಚಟುವಟಕೆಗಳಲ್ಲಿ ಭಾಗಿಯಾದರೆ 10,000ರಿಂದ 15,000 ರೂಪಾಯಿಗಳನ್ನು ನೀಡುತ್ತಿದ್ದರು. ನಮ್ಮ ಈ ಸಹೋದರಿ ಇಂತಹ ಕೆಲದಲ್ಲಿ ಭಾಗಿಯಾಗಲು ನಿರಾಕರಿಸಿದ್ದೇ ಅವಳ ಸಾವಿಗೆ ಕಾರಣವಾಯಿತು" ಎಂದು ಅವರು ಹೇಳಿದ್ದಾರೆ.
ಇಂದು ಮುಂಜಾನೆ, ಉತ್ತರಾಖಂಡದ ರೆಸಾರ್ಟ್‌ನ ಸ್ವಾಗತಕಾರಿಣಿಯ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್ಲಾ ಬಿಜೆಪಿ ನಾಯಕರು ಮೌನವಾಗಿರುವುದು ಅವರ ಸಂವೇದನಾಶೀಲತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಪ್ರಶ್ನಿಸಿದ್ದು, ಪೊಲೀಸ್ ತನಿಖೆಯಲ್ಲಿ ಪಕ್ಷಕ್ಕೆ ನಂಬಿಕೆ ಇಲ್ಲ ಎಂದು ಹೇಳಿದೆ.

ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯನಿಂದ ಹತ್ಯೆ
ಉತ್ತರಾಖಂಡ್‌ನ ಪೌರಿ ಜಿಲ್ಲೆಯ ವನಂತರಾ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ (19) ಅವರ ಶವ ಶನಿವಾರ ರಿಷಿಕೇಶಕ್ಕೆ ಸಮೀಪವಿರುವ ಚೀಲಾ ಕಾಲುವೆಯಲ್ಲಿ ಪತ್ತೆಯಾಗಿದೆ. ಆರು ದಿನಗಳ ನಂತರ ಆಕೆಯ ಪೋಷಕರು ಆಕೆ ಕಾಣೆಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ರೆಸಾರ್ಟ್ ಮಾಲೀಕ ಮತ್ತು ಬಿಜೆಪಿಯ ಮಾಜಿ ನಾಯಕ ಮತ್ತು ರಾಜ್ಯ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರು ಉದ್ಯೋಗಿಗಳು, "ಗ್ರಾಹಕರಿಗೆ ವಿಶೇಷ ಸೇವೆಗಳನ್ನು ನೀಡುವಂತೆ ಒತ್ತಾಯ ಮಾಡಿದ್ದು, ಯುವತಿ ಅದನ್ನು ವಿರೋಧಿಸಿದಾಗ ಆಕೆಯನ್ನು ಕೊಂದಿದ್ದಾರೆ," ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಪುಲ್ಕಿತ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಸಾಕ್ಷ್ಯ ನಾಶಪಡಿಸಲು ಬುಲ್ಡೋಜರ್ ಬಳಕೆ
ನಾಪತ್ತೆಯಾಗಿರುವ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ ನಂತರವೂ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ವಿಳಂಬ ಮಾಡುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಹೇಳಿದೆ. ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್ ಅನ್ನು ಸಾಕ್ಷ್ಯ ನಾಶಪಡಿಸಲು ಬುಲ್ಡೋಜರ್‌ನಿಂದ ಒಡೆಯಲಾಗಿದೆ ಎಂದು ಆರೋಪಿಸಿದ್ದು, ಯಾವ ವಿಐಪಿಯನ್ನು ಉಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅದು ಕೇಳಿದೆ.

ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ಭಾಗಿ
ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಶ್ರೀನಗರ ಸಮೀಪದ ಶ್ರೀಕೋಟ್ ಗ್ರಾಮದಲ್ಲಿರುವ ಭಂಡಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ನಾನು ಅವರೊಂದಿಗೆ ನಿಂತಿದ್ದೇನೆ ಎಂದು ಅವರು ಅವರ ಕುಟುಂಬಕ್ಕೆ ತಿಳಿಸಿದರು.

ಪೊಲೀಸರು ಸಾಕಷ್ಟು ಪುರಾವೆ ಸಲ್ಲಿಕೆ
ಭೇಟಿಯ ಸಂದರ್ಭದಲ್ಲಿ, ಗ್ರಾಮಸ್ಥರು ರಾವತ್ ಅವರಿಗೆ ಜ್ಞಾಪಕ ಪತ್ರವನ್ನು ನೀಡಿ ದುಃಖತಪ್ತ ಕುಟುಂಬಕ್ಕೆ 1 ಕೋಟಿ ರೂಪಾಯಿ ಆರ್ಥಿಕ ನೆರವು ಮತ್ತು ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಕೋರಿದರು. ಜತೆಗೆ ರಸ್ತೆ ಹಾಗೂ ಶಾಲೆಗೆ ಆಕೆಯ ಹೆಸರಿಡುವಂತೆ ಕೋರಿದ್ದರು. ಗ್ರಾಮಸ್ಥರ ಬೇಡಿಕೆಗೆ ಭಂಡಾರಿ ತಂದೆ ವೀರೇಂದ್ರ ಬೆಂಬಲ ವ್ಯಕ್ತಪಡಿಸಿದರು. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು. ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಭಾನುವಾರ ಸಂತ್ರಸ್ತೆಯ ಕುಟುಂಬಕ್ಕೆ ಭರವಸೆ ನೀಡಿದ್ದು, ಆಕೆಯ ಹಂತಕರನ್ನು ಗಲ್ಲಿಗೇರಿಸಲು ಪೊಲೀಸರು ಸಾಕಷ್ಟು ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.












Click it and Unblock the Notifications