Tirumala Weather: ತಿಮ್ಮಪ್ಪನಿಗೆ ಮಳೆಯ ಅಭಿಷೇಕ, ಮಂಜಿನ ಹಾರ- ಪ್ರಕೃತಿ ಸೌಂದರ್ಯಕ್ಕೆ ಮಾರು ಹೋದ ಭಕ್ತರು!
ತಿರುಪತಿ ತಿಮ್ಮಪ್ಪನಿಗೆ ನಿತ್ಯ ಮಳೆಯ ಅಭಿಷೇಕ. ಇಡೀ ದೇವಸ್ಥಾನಕ್ಕೆ ಬಿಳಿ ಹೂವುನಂತೆ ಕಾಣುವ ಮಂಜಿನ ಹಾರ. ಚುಮು ಚುಮು ಚಳಿಯ ನಡುವೆ ಗಂಟೆ ನಾದದಂತೆ ಹಕ್ಕಿಗಳ ಕಲರವ. ದೈವ ಭಕ್ತಿಯನ್ನು ಹೆಚ್ಚಿಸುವ ವಾತಾವರಣ. ಪ್ರಕೃತಿ ಅದೆಷ್ಟು ಸುಂದರ ಅನ್ನೋದಕ್ಕೆ ತಿರುಪತಿಯಲ್ಲಿ ಕಂಡು ಬರುವ ಈ ಒಂದು ದೃಶ್ಯ ಸಾಕ್ಷಿ.
ಹೌದು... ತಿರುಮಲದಲ್ಲಿ ಹವಾಮಾನ ಆಹ್ಲಾದಕರವಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮದಿಂದ ತಿರುಮಲ ಬೆಟ್ಟದ ವಾತಾವರಣದಲ್ಲಿ ಭಾರಿ ಬದಲಾವಣೆಯಾಗಿದೆ. ತಿರುಮಲ ಪ್ರದೇಶದಲ್ಲಿ ದಟ್ಟ ಮಂಜು ಕವಿದಿದ್ದು ನೋಡುಗರಿಗೆ ಹಿತ ನೀಡುತ್ತಿದೆ.

ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಕಾಶವೇ ಕಳಚಿ ಬಿದ್ದಂತಿರುವ ವಾತಾವರಣ ನೋಡುಗರನ್ನು ಬೆರಗುಗೊಳಿಸುತ್ತಿದೆ. ತಿರುಮಲದ ಈ ವಾತಾವರಣ ಹೊಸದನ್ನು ಸೃಷ್ಟಿಸಿರುವುದು ಮಾತ್ರವಲ್ಲದೆ ಆಧ್ಯಾತ್ಮಿಕ ಸೌಂದರ್ಯ ಮತ್ತು ಪ್ರಾಕೃತಿಕ ಸೌಂದರ್ಯ ಎರಡನ್ನೂ ಹೆಚ್ಚಿಸಿದೆ. ತಿರುಮಲದ ಈ ಸೊಬಗನ್ನು ಕಣ್ತುಂಬಿಕೊಳ್ಳುವ ಮೂಲಕ ಭಕ್ತರು ಹೊಸ ಅನುಭವ ಪಡೆಯುತ್ತಿದ್ದಾರೆ.
ಅಲ್ಲದೆ ಇಂದು ತಿರುಪತಿ ಸೇರಿದಂತೆ ಆಂಧ್ರಪ್ರದೇಶದ ಹಲವೆಡೆ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ನವೆಂಬರ್ 28ರ ಮುಂಜಾನೆ ವೇಳೆಗೆ ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆ ಇದ್ದು ಇಂದು ನೆಲ್ಲೂರು, ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ತಿರುಪತಿಯಲ್ಲಿ ಮುಂದಿನ ದಿನಗಳಲ್ಲಿ ಮಂಜು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ತಿಮ್ಮಪ್ಪನಿಗೆ ಮಳೆಯ ಅಭಿಷೇಕ, ಮಂಜಿನ ಹಾರ
ಡಿಸೆಂಬರ್ ತಿಂಗಳು ಆರಂಭಕ್ಕೂ ಮೊದಲು ತಿರುಪತಿಯಲ್ಲಿ ದಟ್ಟ ಮಂಜು ಕಾಣಿಸತೊಡಗಿದೆ. ಆಗಾಗ ಸುರಿಯುವ ಮಳೆ ತಿಮ್ಮಪ್ಪನಿಗೆ ಮಾಡುವ ಅಭಿಷೇಕದಂತೆ ಕಾಣಿಸುತ್ತಿದ್ದು, ದಟ್ಟ ಮಂಜು ದೇವಸ್ಥಾನವನ್ನು ಬಿಳಿ ಹೂವಿನ ಹಾರದಿಂದ ಮುಚ್ಚಿದಂತೆ ಗೋಚರಿಸುತ್ತಿದೆ. ಹಕ್ಕಿಗಳ ಕಲರವ ಗಂಟೆ ನಾದದಂತೆ, ಆಗಾಗ ಬೀಳುವ ಸೂರ್ಯನ ಕಿರಣಗಳು ಆರತಿಯಂತೆ ಕಣ್ಣಿಗೆ ಹಿತ ನೀಡುತ್ತಿದೆ. ಪ್ರಕೃತಿಯೇ ತಿಮ್ಮಪ್ಪನಿಗೆ ಪೂಜಿಸುತ್ತಿದೆ ಎನ್ನುವಷ್ಟು ವಾತಾವರಣದಲ್ಲಿ ಬದಲಾವಣೆ. ತಿರುಪತಿಯಲ್ಲಿನ ಈ ವಾತಾವರಣವನ್ನು ಭಕ್ತರು ಆನಂದಿಸುತ್ತಾ ಭಕ್ತಿ ಭಾವದಲ್ಲಿ ತೇಲಾಡುತ್ತಿದ್ದಾರೆ.
ಮತ್ತೊಂದೆಡೆ ಶ್ರೀನಿವಾಸಮಂಗಪುರಂ ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನ ಕಾರ್ತಿಕ ವನಭೋಜನ ಕಾರ್ಯಕ್ರಮದಲ್ಲಿ ಮಳೆಯಿಂದಾಗಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ದೇವಸ್ಥಾನದಲ್ಲಿಯೇ ಕಾರ್ತಿಕ ವನಭೋಜನ ನಡೆಯಲಿದೆ. ಪವಿತ್ರ ಕಾರ್ತಿಕ ಮಾಸದಲ್ಲಿ ದ್ವಾದಶಿಯಂದು ಇಲ್ಲಿ ವನಭೋಜನ ಆಯೋಜಿಸುವುದು ಸಂಪ್ರದಾಯ. ಇದರ ಅಂಗವಾಗಿ ಬೆಳಗ್ಗೆ 7ರಿಂದ 9ರವರೆಗೆ ಸ್ವಾಮಿ ಹಾಗೂ ಅಮ್ಮನವರ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕೊಂಡೊಯ್ದು 9 ಗಂಟೆಗೆ ಶ್ರೀವಾರಿ ಮೆಟ್ಟು ಪಾರ್ವೇತ ಮಂಟಪದಲ್ಲಿ ಪೂಜೆ ಸಲ್ಲಿಸಲಾಗುವುದು. ಆದರೆ, ಮಳೆಯಿಂದಾಗಿ ದೇವಸ್ಥಾನದಲ್ಲಿಯೇ ವನ ಸಾಲ ಕಾರ್ಯಕ್ರಮ ಆಯೋಜಿಸಲು ಟಿಟಿಡಿ ನಿರ್ಧರಿಸಿದೆ. ದೇವಸ್ಥಾನದಲ್ಲಿ ಎಂದಿನಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಿರುಪತಿಯಲ್ಲಿ ಮೂರು ದಿನ ಮಳೆ
ಮತ್ತೊಂದೆಡೆ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮ ತಿರುಪತಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಐದು ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಹಾಗೂ ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರನ್ನು ಚಂಡಮಾರುತದಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಲಾಗಿದ್ದು, ಹವಾಮಾನ ಇಲಾಖೆಯ ಎಚ್ಚರಿಕೆಯೊಂದಿಗೆ ಜಿಲ್ಲೆ, ವಿಭಾಗ ಮತ್ತು ಮಂಡಲ ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ನೌಕರರು ತಮ್ಮ ವ್ಯಾಪ್ತಿಯ ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಭೇಟಿ ನೀಡಿ ಚರಂಡಿ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕರಾವಳಿಯ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ..ಎಲ್ಲ ಜನರು ತುರ್ತು ಸಂದರ್ಭದಲ್ಲಿ ಸಹಾಯ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.












Click it and Unblock the Notifications