ಕರ್ನಾಟಕದಂತೆ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಅಮರಾವತಿ, ಜುಲೈ. 17: ವಿಧಾನಸಭಾ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಗಸ್ಟ್ 15 ರಂದು ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಲಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದ ಮಹಿಳೆಯರಂತೆ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ.
"ಸೂಪರ್ ಸಿಕ್ಸ್ ಸ್ಕೀಮ್" ಎಂದು ಕರೆಯಲ್ಪಡುವ ಈ ವಿನೂತನ ಯೋಜನೆಗಳ ಮೂಲಕ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಮೂಲಕ ಮಹಿಳೆಯರು, ಬಾಲಕಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಉಚಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ. ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಿಸಲಾಗುತ್ತದೆ.

ಈ ಘೋಷಣೆಯನ್ನು ಕಂದಾಯ ಸಚಿವ ಸತ್ಯ ಪ್ರಸಾದ್ ಅನಗಾನಿ ಮಾಡಿದ್ದಾರೆ. ಚನಾವಣೆಗೆ ಮುನ್ನ 'ಸೂಪರ್ ಸಿಕ್ಸ್' ಯೋಜನೆಗಳ ಭಾಗವಾಗಿ ಟಿಡಿಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ. ಪಲ್ಲೆ ವೆಲುಗು ಮತ್ತು ಎಕ್ಸ್‌ಪ್ರೆಸ್ ಬಸ್‌ಗಳು ಈ ಸೌಲಭ್ಯವನ್ನು ನೀಡಲಿವೆ. ಆಂಧ್ರಪ್ರದೇಶದ ಗಡಿಗಳಲ್ಲಿ ಅಂತರರಾಜ್ಯ ಪ್ರಯಾಣಕ್ಕೂ ಈ ಯೋಜನೆ ಅನ್ವಯಿಸುತ್ತದೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಚುನಾವಣಾ ಭರವಸೆಗಳನ್ನು ಜಾರಿಗೆ ತರಲು ಆರಂಭಿಸಿದ್ದಾರೆ. APSRTC ಉಚಿತ ಬಸ್ ಯೋಜನೆಯನ್ನು ಎಪಿ ರಾಜ್ಯ ಸಾರಿಗೆ, ಕ್ರೀಡೆ ಮತ್ತು ಯುವಜನ ಸೇವೆಗಳ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅವರು ಪ್ರಾರಂಭಿಸಿದ್ದಾರೆ.
ಈ ಯೋಜನೆಯು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಅವರು ತಮ್ಮ ಸಾರಿಗೆ ಅಗತ್ಯಗಳಿಗಾಗಿ ಇತರರನ್ನು ಅವಲಂಬಿಸಬೇಕಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಪಿಂಚಣಿ ಹೆಚ್ಚಳ, ಮೆಗಾ ಡಿಎಸ್‌ಸಿ ಅಧಿಸೂಚನೆಗಳು, ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಯುವಕರಿಗೆ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ, ನಿರುದ್ಯೋಗಿಗಳಿಗೆ 3,000 ರೂ. ಭತ್ಯೆ, ವರ್ಷಕ್ಕೆ ಪ್ರತಿ ತಾಯಿಗೆ 15,000 ರೂ. ಹೆರಿಗೆ ಅನುದಾನ ಸೇರಿದಂತೆ ಟಿಡಿಪಿ ಭರವಸೆ ನೀಡಿದ ಸೂಪರ್ ಸಿಕ್ಸ್ ಯೋಜನೆಗಳು ಇವು.
APSRTC ಅಧಿಕಾರಿಗಳು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಈ ಯೋಜನೆಯ ಅನುಷ್ಠಾನದ ಕುರಿತು ವರದಿಗಳನ್ನು ಕೇಳಿದ್ದಾರೆ. ಪ್ರತಿದಿನ ಪ್ರಯಾಣಿಸುವ ಮಹಿಳೆಯರ ಸಂಖ್ಯೆ, ಸರ್ಕಾರದ ಮೇಲಿನ ಹೊರೆ, ಇತರವುಗಳ ಅನುಷ್ಠಾನದ ಸಮಯದಲ್ಲಿ ಸಂಭವನೀಯ ಸಮಸ್ಯೆಗಳ ಕುರಿತು ವಿವರಗಳನ್ನು ಕೋರಿದ್ದಾರೆ.
ಇನ್ನು, ವರದಿಗಳ ಪ್ರಕಾರ ತೆಲಂಗಾಣದಲ್ಲಿ ಯೋಜನೆಯ ಅನುಷ್ಠಾನಕ್ಕೆ ವರ್ಷಕ್ಕೆ ಸುಮಾರು 1,500 ಕೋಟಿ ರೂಪಾಯಿ ವೆಚ್ಚವಾಗಬಹುದು ಮತ್ತು 2023 ರ ಡಿಸೆಂಬರ್‌ನಲ್ಲಿ ಯೋಜನೆ ಪ್ರಾರಂಭವಾದಾಗ ರಾಜ್ಯ ಸರ್ಕಾರವು 374 ಕೋಟಿ ರೂಪಾಯಿಗಳನ್ನು ಸಬ್ಸಿಡಿಯಾಗಿ ಬಿಡುಗಡೆ ಮಾಡಿದೆ. ಸಾರಿಗೆ ಸಂಸ್ಥೆಯು ಆರಂಭದಲ್ಲಿ ಪ್ರತಿ ತಿಂಗಳು 250 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ತಿಳಿಸಿತ್ತು.












Click it and Unblock the Notifications