ಆಂಧ್ರ ಪ್ರದೇಶ ಲ್ಯಾಬ್ ರಿಯಾಕ್ಟರ್ ಬ್ಲಾಸ್ಟ್: 5 ಸಾವು, ಹಲವರಿಗೆ ಗಾಯ
ಬೆಂಗಳೂರು, ಜೂನ್ 30: ನೆರೆ ರಾಜ್ಯ ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ ಮಂಗಳವಾರ ಫಾರ್ಮಾಸ್ಯುಟಿಕಲ್ ಲ್ಯಾಬ್‌ನಲ್ಲಿ ರಿಯಾಕ್ಟರ್ ಸ್ಫೋಟಗೊಂಡ ಘಟನೆ ನಡೆದಿದೆ. ಇದರಿಂದಾಗಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಕಾರ್ಮಿಕರು ಮೃತಪಟ್ಟಿದ್ದಲ್ಲದೇ, ಅನೇಕ ಮಂದಿ ಗಾಯಗೊಂಡಿದ್ದಾರೆ.
ಆಂಧ್ರದ ಅನಕಪಲ್ಲಿ ಜಲ್ಲೆಯ ಅಚ್ಯುತಪುರಂ ಫಾರ್ಮಾ ವಿಶೇಷ ಆರ್ಥಿಕ ವಲಯದಲ್ಲಿರುವ 'ಸಾಹಿತ್ಯ ಫಾರ್ಮಾ' ಘಟಕದಲ್ಲಿ ಈ ಸ್ಫೋಟ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ಸಾಹಿತ್ಯ ಫಾರ್ಮಾ' ಘಟಕದ ಲ್ಯಾಬ್‌ನಲ್ಲಿ ರಿಯಾಕ್ಟರ್ ಸ್ಫೋಟದಿಂದ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತಲ್ಲದೇ ಪ್ರಯೋಗಾಲಯದಿಂದ ದೊಡ್ಡ ಮಟ್ಟದಲ್ಲಿ ಹೊಗೆಯು ಬರಲಾರಂಭಿಸಿತು. ಅಲ್ಲಿಯೇ ಸಮೀಪದಲ್ಲಿ ಟ್ಯಾಂಕ್‌ಗಳು ಮತ್ತು ಸಾಹಿತಿ ಫಾರ್ಮಾದ ಇನ್ನೊಂದು ಘಟಕಕ್ಕೂ ಬೆಂಕಿ ವ್ಯಾಪಿಸಿತು. ಸದ್ಯ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಅಗ್ನಿ ಶಾಮಕ ಸಿಬ್ಬಂದಿಯು ಬೆಂಕಿ ನಂದಿಸುವ ಕಾರ್ಯಕದಲ್ಲಿ ನಿರತರಾಗಿದ್ದಾರೆ.
ಆಗ್ನಿಶಾಮಕ ಸಿಬ್ಬಂದಿ ಬರುವ ಹೊತ್ತಿಗಾಗಲೇ ರಿಯಾಕ್ಟರ್ ಸ್ಫೋಟಕ ಪ್ರಭಾವಕ್ಕೆ ಸಿಲುಕಿ 5 ಕಾರ್ಮಿಕರು ಸಾವನ್ನಪ್ಪಿದರು. ಗಾಯಗೊಂಡ ಹಲವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಅನಕಪಲ್ಲಿ ಎಸ್‌ಪಿ ಹೇಳಿದ್ದೇನು?
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಹೇಗಾಯಿತೆಂದು ತನಿಖೆ ಆರಂಭಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು?, ಆಡಳಿತ ಮಂಡಳಿ ಎಚ್ಚರಿಕೆ ವಹಿಸಿತ್ತೇ ಇಲ್ಲವೇ? ಎಂದು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ (SP) ಮುರಳಿ ಕೃಷ್ಣ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಮಹಿಳಾ ಕಾರ್ಮಿಕರು ಮತ್ತು ಮೂವರು ಪುರುಷರು ಎಂದು ಗುರುತಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಹಿತ್ಯ ಫಾರ್ಮಾ ಮಾಲೀಕರ ಇಲ್ಲವೇ ಸಂಬಂಧಿಸಿದವರ ಪ್ರತಿಕ್ರಿಯೆ ಬರಬೇಕಿದೆ.












Click it and Unblock the Notifications