ಅನಂತ್ ಕುಮಾರ್ ಅವರ ಖಾತೆ ಸದಾನಂದ ಗೌಡರಿಗೆ ಹಂಚಿಕೆ
Recommended Video

ನವದೆಹಲಿ, ನವೆಂಬರ್ 13 : ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದಿಂದ ತೆರವಾಗಿದ್ದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಖಾತೆ ಬದಲಾವಣೆ ಮಾಡಿ ಸಲ್ಲಿಸಿದ್ದ ಕಡತಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಮಂಗಳವಾರ ರಾತ್ರಿ ಖಾತೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಂಚಿಕೆ ಮಾಡಲಾಗಿದೆ. ಅನಂತ್ ಕುಮಾರ್ ಅವರ ಬಳಿ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ ಖಾತೆಗಳಿತ್ತು.
ಕೇಂದ್ರ ಸಚಿವ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಂಚಿಕೆ ಮಾಡಲಾಗಿದೆ. ಅವರ ಬಳಿ ಇರುವ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಖಾತೆಯ ಜೊತೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಸಂಸದೀಯ ವ್ಯವಹಾರ ಖಾತೆಯ ಹೊಣೆಯನ್ನು ನರೇಂದ್ರ ಸಿಂಗ್ ಥೋಮರ್ ಅವರಿಗೆ ವಹಿಸಲಾಗಿದೆ. ಅವರ ಬಳಿ ಇರುವ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಜೊತೆಗೆ ಹೆಚ್ಚುವರಿಯಾಗಿ ಸಂಸದೀಯ ವ್ಯವಹಾರ ಖಾತೆ ಹೊಣೆಯನ್ನು ವಹಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಸೋಮವಾರ ಮುಂಜಾನೆ ವಿಧಿವಶರಾಗಿದ್ದರು. ಮಂಗಳವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.












Click it and Unblock the Notifications