ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ್ದ ಐಟಿ ಉದ್ಯೋಗಿ ಬಂಧನ
ಪುಣೆ, ಜೂನ್ 12: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಪುಣೆಯ 34 ವರ್ಷದ ಐಟಿ ಉದ್ಯೋಗಿಯೊಬ್ಬನನ್ನು ಬಂಧಿಸಿದೆ.
ಆರೋಪಿಯನ್ನು ಸಾಗರ್ ಬರ್ವೆ ಎಂದು ಗುರುತಿಸಲಾಗಿದ್ದು, ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಜೂನ್ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯು ಎನ್‌ಸಿಪಿ ಮುಖ್ಯಸ್ಥರಿಗೆ ಕೊಲೆ ಬೆದರಿಕೆ ಕಳುಹಿಸಲು ಎರಡು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದನು ಎಂದು ತಿಳಿದು ಬಂದಿದೆ. ಮೇ 9 ರಂದು ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಬಂದಿರುವುದಾಗಿ ಸುಪ್ರಿಯಾ ಸುಳೆ ಹೇಳಿದ್ದರು. ಈ ಕ್ರಮವನ್ನು ಕೀಳುಮಟ್ಟದ ರಾಜಕೀಯ ಎಂದು ಅವರು ಕರೆದು ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದರು.
ಶರದ್ ಪವಾರ್ ಸಾಹೇಬ್‌ಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದ್ದು ವೆಬ್‌ಸೈಟ್ ಮೂಲಕ ಅವರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ನ್ಯಾಯಕ್ಕಾಗಿ ನಾನು ಪೊಲೀಸರ ಬಳಿಗೆ ಬಂದಿದ್ದೇನೆ. ಮಹಾರಾಷ್ಟ್ರದ ಗೃಹ ಸಚಿವರು ಮತ್ತು ಕೇಂದ್ರ ಗೃಹ ಸಚಿವರಿಗೆ ಕ್ರಮ ಕೈಗೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ಇಂತಹ ಕ್ರಮಗಳು ಕೀಳು ಮಟ್ಟದ ರಾಜಕೀಯವನ್ನು ಪ್ರತಿನಿಧಿಸುತ್ತವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳನ್ನು ಹೊಣೆ ಮಾಡಲಾಗುವುದು. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗೃಹ ಇಲಾಖೆ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಇಂತಹ ಪ್ರಕರಣಗಳಲ್ಲಿ ರಾಜಕೀಯವನ್ನು ಬದಿಗಿಡಬೇಕು. ನರೇಂದ್ರ ದಾಭೋಲ್ಕರ್ (2013 ರಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ವಿಚಾರವಾದಿ) ಅವರಿಗೆ ಆದ ಗತಿಯನ್ನೇ ನೀವು ಅನುಭವಿಸಬೇಕಾಗುತ್ತದೆ ಎಂದು ಪವಾರ್ ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಎನ್‌ಸಿಪಿ ನಾಯಕರು ಪೊಲೀಸರಿಗೆ ತಿಳಿಸಿದ್ದರು.
ಇತ್ತೀಚೆಗೆ ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಶರದ್ ಪವಾರ್ ಅವರು ಘೋಷಿಸಿದ್ದರು. ಆದರೆ ಕಾರ್ಯಕರ್ತರು ಪ್ರತಿಭಟನೆಗೆ ಇಳಿದ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬಳಿಕ ಶನಿವಾರ ತಮ್ಮ ಮಗಳಾದ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಹಾಗೂ ಪ್ರಫುಲ್ಲಾ ಪಟೇಲ್ ಅವರನ್ನು ಎನ್‌ಸಿಪಿಯ ಕಾರ್ಯಾಧ್ಯಕ್ಷರಾಗಿ ಪವಾರ್ ನೇಮಕ ಮಾಡಿದ್ದರು.












Click it and Unblock the Notifications