Amway ಇಂಡಿಯಾದ 750 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ನವದೆಹಲಿ, ಏಪ್ರಿಲ್ 19: ಗ್ರಾಹಕ ಸರಕುಗಳ ನೇರ ಮಾರಾಟಗಾರ ಸಂಸ್ಥೆ ಆಮ್‌ವೇ ಇಂಡಿಯಾ(Amway )ಗೆ ಸೇರಿದ 757 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಆಮ್ವೇ ಇಂಡಿಯಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ತಾತ್ಕಾಲಿಕವಾಗಿ ಜಪ್ತಿ ಮಾಡಿದ ಆಸ್ತಿಗಳಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಭೂಮಿ ಮತ್ತು ಕಾರ್ಖಾನೆ ಕಟ್ಟಡ, ಸ್ಥಾವರ ಮತ್ತು ಯಂತ್ರೋಪಕರಣಗಳು, ವಾಹನಗಳು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿ ಸೇರಿವೆ ಎಂದು ಜಾರಿ ನಿರ್ದೇಶನಾಲಯ/ ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದ ಬಳಿಕ ಈ ಆಸ್ತಿಯನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಒಟ್ಟು ರೂಪಾಯಿ 757.77 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಈ ಪೈಕಿ ಸ್ಥಿರ ಮತ್ತು ಚರ ಆಸ್ತಿಗಳು ರೂಪಾಯಿ 411.83 ಕೋಟಿ ಮೌಲ್ಯದ್ದಾಗಿದ್ದು, ಉಳಿದವು ರೂಪಾಯಿ 345.94 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಆಗಿದೆ. ಆಮ್ವೇಗೆ ಸೇರಿದ 36 ಖಾತೆಗಳಲ್ಲಿ ಈ ಹಣವನ್ನು ಇರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈ ಕಂಪನಿಯು ಬಹು-ಹಂತದ ಮಾರ್ಕೆಟಿಂಗ್ "ಹಗರಣ"ವನ್ನು ನಡೆಸುತ್ತಿದೆ ಎಂದು ಜಾರಿ ನಿರ್ದೇಶನಾಲಯವು ಆರೋಪ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಠಿತ ತಯಾರಕರ ಪರ್ಯಾಯ ಜನಪ್ರಿಯ ಉತ್ಪನ್ನಗಳ ಬೆಲೆಗೆ ಹೋಲಿಕೆ ಮಾಡಿದಾಗ ಈ ಕಂಪನಿಯಲ್ಲಿ ಮಾರುವ ವಸ್ತುವಿಗೆ ಭಾರೀ ಬೆಲೆ ಇದೆ ಎಂದು ಇಡಿ ದೂರಿದೆ.
ಪಿರಮಿಡ್ ವಂಚನೆಯ ಆರೋಪ
"ಆಮ್ವೇ ನೇರ ಮಾರಾಟದ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ನೆಟ್‌ವರ್ಕ್‌ನ ಸೋಗಿನಲ್ಲಿ ಪಿರಮಿಡ್ ವಂಚನೆ ನಡೆಸುತ್ತಿದೆ ಎಂದು ಇಡಿಯ ಮನಿ ಲಾಂಡರಿಂಗ್ ತನಿಖೆಯಿಂದ ತಿಳಿದುಬಂದಿದೆ," ಎಂದು ಸಂಸ್ಥೆಯು ಹೇಳಿದೆ.
"ನಿಜವಾದ ಸಂಗತಿಗಳನ್ನು ತಿಳಿಯದೆ, ಸಾಮಾನ್ಯ ಜನಸಾಮಾನ್ಯರು ಕಂಪನಿಯ ಸದಸ್ಯರಾಗಿ ಸೇರುತ್ತಾರೆ. ಅತಿಯಾದ ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದರಿಂದಾಗಿ ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ ಸದಸ್ಯರು ಅವುಗಳನ್ನು ಬಳಸಲು ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಆದರೆ ಆಫ್‌ಲೈನ್ ಸದಸ್ಯರು ಪ್ರದರ್ಶಿಸಿದಂತೆ ಸದಸ್ಯರಾಗುವ ಮೂಲಕ ಶ್ರೀಮಂತರಾಗುತ್ತಾರೆ. ವಾಸ್ತವವೆಂದರೆ ಆಫ್‌ಲೈನ್ ಸದಸ್ಯರು ಪಡೆಯುವ ಕಮಿಷನ್‌ಗಳು ಉತ್ಪನ್ನಗಳ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ," ಎಂದು ಈ ತೀವ್ರ ಬೆಲೆಯ ಬಗ್ಗೆ ಸಂಸ್ಥೆಯು ತಿಳಿಸಿದೆ.
ಜನರಲ್ಲಿ ಶ್ರೀಮಂತರಾಗುವ ಆಸೆ ಹುಟ್ಟಿಸುವ ಕಂಪನಿ
"ಕಂಪನಿಯ ಸಂಪೂರ್ಣ ಗಮನವು ಸದಸ್ಯರಾಗುವ ಮೂಲಕ ಸದಸ್ಯರು ಹೇಗೆ ಶ್ರೀಮಂತರಾಗಬಹುದು ಎಂಬುದನ್ನು ಪ್ರಚಾರ ಮಾಡುವುದು ಆಗಿದೆ. ಶ್ರೀಮಂತರಾಗುವ ಆಸೆಯನ್ನು ಜನರಿಗೆ ತೋರಿಸಲಾಗುತ್ತದೆ. ಉತ್ಪನ್ನಗಳ ಮೇಲೆ ಯಾವುದೇ ಗಮನವನ್ನು ಹರಿಸದೆಯೇ ಶ್ರೀಮಂತರಾಗುವ ಕನಸನ್ನು ಜನರು ಕಾಣುವಂತೆ ಮಾಡುತ್ತದೆ. ನೇರ ಮಾರಾಟದ ಕಂಪನಿಯಾಗಿ ಪಿರಮಿಡ್ ವಂಚನೆಯನ್ನು ಮರೆಮಾಚಲು ಉತ್ಪನ್ನಗಳನ್ನು ಬಳಸಲಾಗುತ್ತದೆ," ಎಂದು ಸಂಸ್ಥೆ ಹೇಳಿದೆ.
ಆಮ್ವೇ ಇಂಡಿಯಾ ಹೇಳುವುದು ಏನು?
ಈ ಬಗ್ಗೆ ಆಮ್ವೇ ಇಂಡಿಯಾ ಹೇಳಿಕೆಯನ್ನು ನೀಡಿದೆ. "ಅಧಿಕಾರಿಗಳ ಕ್ರಮವು 2011 ರ ಹಿಂದಿನ ತನಿಖೆಗೆ ಸಂಬಂಧಿಸಿದೆ ಮತ್ತು ಅಂದಿನಿಂದ ನಾವು ಇಲಾಖೆಯೊಂದಿಗೆ ಸಹಕರಿಸುತ್ತಿದ್ದೇವೆ. 2011 ರಿಂದ ಕಾಲಕಾಲಕ್ಕೆ ಕೋರಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಬಾಕಿ ಉಳಿದಿರುವ ಸಮಸ್ಯೆಗಳ ನ್ಯಾಯೋಚಿತ, ಕಾನೂನು ಮತ್ತು ತಾರ್ಕಿಕ ತೀರ್ಮಾನಕ್ಕೆ ಸಂಬಂಧಿತ ಸರ್ಕಾರಿ ಅಧಿಕಾರಿಗಳು ಮತ್ತು ಕಾನೂನು ಅಧಿಕಾರಿಗಳೊಂದಿಗೆ ನಾವು ಸಹಕರಿಸುವುದನ್ನು ಮುಂದುವರಿಸುತ್ತೇವೆ," ಎಂದು ಹೇಳಿಕೊಂಡಿದೆ.












Click it and Unblock the Notifications