ದೇಶದಲ್ಲಿ ಇಂಗ್ಲೀಷ್ ಮಾತನಾಡುವವರು ನಾಚಿಕೆಪಡುವ ಕಾಲ ದೂರ ಇಲ್ಲ; ಕೇಂದ್ರ ಸಚಿವ ಅಮಿತ್ ಶಾ
Amit Shah: ಹಿಂದಿ ಹೇರಿಕೆ ವಿರೋಧಿಸಿ ದೇಶದ ದಕ್ಷಿಣ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆಗಳೇ ನಡೆದಿವೆ. ಈ ನಡುವೇ ಇದೀಗ ಕೇಂದ್ರ ಗೃಹ ಸಚಿವ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ ಎಂದು ಹೇಳಿ ಗಮನ ಸೆಳೆದಿದ್ದಾರೆ. ಹಾಗಾದ್ರೆ ಈ ಮಾತು ಹೇಳಲು ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾಜಿ ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಬರೆದ 'ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂನ್' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ದೇಶದ ಭಾಷಾ ಪರಂಪರೆಯನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ದಿನ ಬಂದಿದೆ. ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ನಾಚಿಕೆ ಪಟ್ಟುಕೊಳ್ಳುವಂತಹ ಸಮಯ ಹತ್ತಿರ ಆಗಿದೆ ಎಂದು ಹೇಳಿದರು.

ಸ್ಥಳೀಯ ಭಾಷೆಗಳು ಭಾರತದ ಗುರುತಿನ ಕೇಂದ್ರ ಆಗಿದ್ದು, ವಿದೇಶಿ ಭಾಷೆಗಳಿಗಿಂತ ಹೆಚ್ಚು ಆದ್ಯತೆ ನೀಡಬೇಕು. ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ. ಅಂತಹ ಸಮಾಜದ ಸೃಷ್ಟಿಗೆ ದೂರ ಇಲ್ಲ. ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳು ಎಂದು ನಂಬುತ್ತೇನೆ. ನಮ್ಮ ಭಾಷೆಗಳಿಲ್ಲದೆ, ನಾವು ನಿಜವಾದ ಭಾರತೀಯರು ಆಗುವುದಿಲ್ಲ ಅಂತಲೂ ಹೇಳಿದರು.
ಭಾರತದ ಭಾಷಾ ಪರಂಪರೆಯನ್ನು ಮರಳಿ ಪಡೆಯಲು ದೇಶಾದ್ಯಂತ ನವೀಕೃತ ಪ್ರಯತ್ನಕ್ಕೆ ಕರೆ ನೀಡಿದರು. ಪ್ರಪಂಚದಾದ್ಯಂತ ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಅನ್ನು ತಿರಸ್ಕರಿಸಲಾಗುವುದು. ನಮ್ಮ ದೇಶ, ಸಂಸ್ಕೃತಿ, ಇತಿಹಾಸ ಮತ್ತು ನಮ್ಮ ಧರ್ಮವನ್ನು ಅರ್ಥಮಾಡಿಕೊಳ್ಳಲು ಯಾವುದೇ ವಿದೇಶಿ ಭಾಷೆ ಸಾಕಾಗುವುದಿಲ್ಲ. ಅರೆಬೆಂದ ವಿದೇಶಿ ಭಾಷೆಗಳ ಮೂಲಕ ಸಂಪೂರ್ಣ ಭಾರತದ ಕಲ್ಪನೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಇದು ಎಷ್ಟು ಕಷ್ಟಕರ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ ಭಾರತೀಯ ಸಮಾಜವು ಇದರಲ್ಲಿ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಮತ್ತೊಮ್ಮೆ ಸ್ವಾಭಿಮಾನದಿಂದ ನಾವು ನಮ್ಮ ದೇಶವನ್ನು ನಮ್ಮದೇ ಭಾಷೆಗಳಲ್ಲಿ ನಡೆಸುವುದಲ್ಲದೆ, ಜಗತ್ತನ್ನು ಸಹ ಮುನ್ನಡೆಸುತ್ತೇವೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯ ಭಾಗ ಆಗಿರುವ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವ ಮೂಲಕ ಕೇಂದ್ರವು ಹಿಂದಿಯನ್ನು ಹೇರುತ್ತಿದೆ ಎಂದು ದಕ್ಷಿಣದ ರಾಜ್ಯಗಳು ಆರೋಪಿಸಿರುವ ಬೆನ್ನಲ್ಲೇ ಅಮಿತ್ ಶಾ ಅವರು ಈ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ, 2047 ರ ವೇಳೆಗೆ ನಮ್ಮ ಬದಲಾವಣೆಯ ಪ್ರಯಾಣವು ನಮ್ಮ ದೇಶದ ವೈಭವವನ್ನು ಮರಳಿ ತರುತ್ತದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.












Click it and Unblock the Notifications