Chandrayaan-3: ಭಾರತದ ಸ್ನೇಹ ಸಿಕ್ಕಿದ್ದೇ ನಮ್ಮ ಭಾಗ್ಯ ಅಂತು ಅಮೆರಿಕ
ಭಾರತ ಮಾಡಿದ ಸಾಧನೆಗೆ ಇಡೀ ಜಗತ್ತು ತಲೆಬಾಗಿ ನಮಿಸುತ್ತಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಜಗತ್ತಿನ ಮೊದಲ ರಾಷ್ಟ್ರ ಭಾರತವಾಗಿದೆ. 'ಚಂದ್ರಯಾನ-3' ಯೋಜನೆ ಮೂಲಕ, ಭಾರತವು ಅಸಾಧ್ಯವಾದ ವಿಚಾರದಲ್ಲೂ ದೊಡ್ಡ ಸಾಧನೆ ಮಾಡಿದೆ ಎಂದು ಶ್ರೀಮಂತ ರಾಷ್ಟ್ರಗಳೇ ಹೊಗಳುತ್ತಿವೆ. ಇದೇ ಸಂದರ್ಭದಲ್ಲಿ ದೊಡ್ಡಣ್ಣ ಅಮೆರಿಕ ಕೂಡ ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದೆ.
ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದ ಹೆಸರು ರಾರಾಜಿಸುತ್ತದೆ. ಹೀಗೆ ಅಮೆರಿಕ ಬಾಹ್ಯಾಕಾಶ ಲೋಕದಲ್ಲಿ ಮಾಡದ ಸಾಧನೆ ಇಲ್ಲ. ಜಗತ್ತಿನ ಯಾವುದೇ ರಾಷ್ಟ್ರ ಅಮೆರಿಕದ ನಾಸಾ ಮಾಡಿರುವಷ್ಟು ಸಾಧನೆ ಮಾಡಿಲ್ಲ. ಆದರೆ ಇಂತಹ ನಾಸಾ ಸಂಸ್ಥೆಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಲು ಆಗಿಲ್ಲ. ಆದರೆ ಭಾರತ ಮಾತ್ರ ಕೆಚ್ಚೆದೆ ತೋರಿ, ಜಗತ್ತಿನ ಯಾವ ದೇಶವೂ ಮಾಡದ ಸಾಧನೆ ಮಾಡಿದೆ. ಅಮೆರಿಕ ಈಗ ಪ್ರತಿಕ್ರಿಯೆ ನೀಡಿದ್ದು, ಭಾರತಕ್ಕೆ ಜೈ ಎಂದಿದೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತದ ಸಾಧನೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?

ಭಾರತದ ಸ್ನೇಹ ಸಿಕ್ಕಿದ್ದೇ ಭಾಗ್ಯ!
ಚಂದ್ರನ ಮೇಲೆ ಭಾರತ ಲ್ಯಾಂಡರ್‌ನ ಇಳಿಸಿರುವ ಬಗ್ಗೆ ಕಮಲಾ ಹ್ಯಾರಿಸ್ ಪ್ರತಿಕ್ರಿಯಿಸಿ, ಭಾರತದ ಸಾಧನೆಗೆ ಕಾರಣವಾದ ಎಲ್ಲಾ ವಿಜ್ಞಾನಿಗಳು & ಎಂಜಿನಿಯರ್‌ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಈ ಯೋಜನೆಯಲ್ಲಿ ಭಾರತದ ಜೊತೆಗೆ ನಾವು ಕೂಡ ಕೈಜೋಡಿಸಿ ನಿಂತಿದ್ದಕ್ಕೆ, ಬಾಹ್ಯಾಕಾಶ ಸಂಶೋಧನೆಗಳಲ್ಲಿ ಅಮೆರಿಕದ ಜೊತೆ ಭಾರತದ ಪಾಲುದಾರಿಕೆ ಹೆಮ್ಮೆ ತರಿಸಿದೆ ಎಂದಿದ್ದಾರೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್. ಈ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಭಾರತಕ್ಕೆ ಜೈ ಎಂದಿದೆ.
ಇಸ್ರೋ & ನಾಸಾ ಸಂಬಂಧ ಹೇಗಿದೆ?
ಭಾರತ ಬಾಹ್ಯಾಕಾಶ ಲೋಕದಲ್ಲಿ ತನ್ನದೇ ಶಕ್ತಿ ಮೂಲಕ ಬೆಳೆದು ನಿಂತಿದೆ. ಆದ್ರೆ ನಾಸಾ ಮತ್ತು ಅಮೆರಿಕ ಇದುವರೆಗೂ ಭಾರತಕ್ಕೆ ಸಾಹಯ ಮಾಡಲು ಮುಂದಾದ ಉದಾಹರಣೆ ಇಲ್ಲಿಯ ತನಕ ಇರಲಿಲ್ಲ. ಕಳೆದ ಕೆಲ ವರ್ಷದಿಂದ ಇಸ್ರೋ ಜೊತೆ ನಾಸಾ ಕೈಜೋಡಿಸಲು ಮುಂದೆ ಬರುತ್ತಿದೆ. ಮಂಗಳ ಗ್ರಹಕ್ಕೆ ಭಾರತ ಯಶಸ್ವಿಯಾಗಿ ಉಪಗ್ರಹ ಕಳುಹಿಸಿದ ಬಳಿಕ ನಾಸಾ ಮತ್ತಷ್ಟು ಸ್ನೇಹ ಬೆಳೆಸಿದೆ. ಹಾಗೇ ಇದೇ ಮೊದಲ ಬಾರಿಗೆ ತನ್ನಲ್ಲಿನ ತಂತ್ರಜ್ಞಾನ ಹಾಗೂ ಮಾಹಿತಿ ಕೇಂದ್ರಗಳನ್ನು ಚಂದ್ರಯಾನ-3 ಯೋಜನೆಗಾಗಿ ಇಸ್ರೋ ಜೊತೆಗೆ ನಾಸಾ ಹಂಚಿಕೊಂಡಿತ್ತು.
ನಾಸಾ ಮಾಡಿದ ಸಹಾಯ ಏನು?
ನಾಸಾ & ಯುರೋಪ್ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋ ಜೊತೆ ಸಾಥ್ ಕೊಟ್ಟು ನಿಂತಿದ್ದವು. ಗ್ರೌಂಡ್ ಸ್ಟೇಷನ್ ನೆರವಿಲ್ಲದೆ ನೌಕೆಯ ಮಾಹಿತಿ ಪಡೆಯುವುದು ಅಸಾಧ್ಯ. ಈ ಸ್ಥಿತಿಯಲ್ಲಿ ಭೂಮಿ ಮೇಲಿನ ನಿಯಂತ್ರಣ ಕೇಂದ್ರದೊಂದಿಗೆ ನೌಕೆ ನಿರಂತರ ಸಂಪರ್ಕ ಹೊಂದಿದರೆ ಅನಿರೀಕ್ಷಿತ ಅಪಾಯ ತಪ್ಪಿಸುವ ಅವಕಾಶ ಇರಲಿದೆ. ಇದೇ ಕಾರಣಕ್ಕೆ ಅಮೆರಿಕದ ನಾಸಾ ಹಾಗೂ ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋಗೆ ಸಾಥ್ ನೀಡಿ ನಿಂತಿದ್ದವು.

ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಸಾಥ್ ಕೂಡ ಒಂದಷ್ಟು ಸಹಾಯ ಮಾಡಿದೆ. ಆದರೆ ಇಸ್ರೋ ವಿಜ್ಞಾನಿಗಳ ಕಾರ್ಯವೇ ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ವಿಚಾರ. ಹಗಲು, ರಾತ್ರಿ ಲೆಕ್ಕಿಸದೇ ಈ ಸಾಧಕರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ, ಇಸ್ರೋ ಮತ್ತೊಮ್ಮೆ ಭಾರತದ ಹೆಸರನ್ನ ಬಾಹ್ಯಾಕಾಶಕ್ಕೆ ಹರಡಿಸಿದೆ. ಮುಂದೆ ಭಾರತದ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಡೆಸುವ ಅಧ್ಯಯನ ಮಾನವನ ಭವಿಷ್ಯ ರೂಪಿಸಲಿದೆ.
ಜಗತ್ತಿಗೇ ತನ್ನ ಶಕ್ತಿ ತೋರಿಸಿದ ಭಾರತ
ಇಸ್ರೋ ಸಂಸ್ಥೆ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಡೀ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕು ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ. ಹಾಗೇ ಭಾರತ ಕಳುಹಿಸಿರುವ ರೋವರ್ ಚಂದ್ರನ ಮೇಲೆ ಅಧ್ಯಯನ ಶುರು ಮಾಡಿದೆ.












Click it and Unblock the Notifications