ಟ್ರಸ್ಟ್ (TRUST) ಫೆಲೊಶಿಪ್‌ಗೆ ಚಾಲನೆ ನೀಡಿದ ಅಮೆರಿಕ ರಾಯಭಾರಿ ಗೋರ್, ʻಫ್ರೀಡಂ 250ʼ ಸಂಭ್ರಮದಲ್ಲಿ ಅಮೆರಿಕ-ಭಾರತ ಸಹಭಾಗಿತ್ವ
ಬೆಂಗಳೂರು: ಭಾರತದಲ್ಲಿನ ಅಮೇರಿಕದ ರಾಯಭಾರಿ (American Ambassador Gore) ಸರ್ಜಿಯೊ ಗೋರ್ ಅವರು ಭಾನುವಾರ ಬೆಂಗಳೂರಿನಲ್ಲಿ ನಡೆದ ಅಮೆರಿಕ ರಾಯಭಾರ ಕಚೇರಿಯ ರಾಷ್ಟ್ರೀಯ ದಿನದ ಸ್ವಾಗತ ಸಮಾರಂಭದಲ್ಲಿ ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರು (TRUST) ಫೆಲೋಶಿಪ್‌ಗೆ ಚಾಲನೆ ನೀಡಿದರು. ಅಲ್ಲದೇ, ಅಮೆರಿಕ-ಭಾರತ ಸಹಭಾಗಿತ್ವದ ಮೂಲಕ ಅಮೆರಿಕದ ಉದ್ಯೋಗಿಗಳು ಮತ್ತು ಉದ್ಯಮಗಳಿಗೆ ಸ್ಪಷ್ಟ ಹಾಗೂ ನೇರ ಪ್ರಯೋಜನಗಳನ್ನು ಒದಗಿಸುವ ಟ್ರಂಪ್ ಆಡಳಿತದ ಬದ್ಧತೆಯನ್ನು ಪುನರುಚ್ಚರಿಸಿದರು.

ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ರಾಯಭಾರಿ ಗೋರ್ ಅವರು, "ಪ್ರತಿ ವಾರವೂ ನಮ್ಮ ರಾಯಭಾರ ಕಚೇರಿ ಸ್ಪಷ್ಟ ಹಾಗೂ ನೈಜ ಫಲಿತಾಂಶಗಳನ್ನು ನೀಡಲು ಶ್ರಮಿಸುತ್ತಿದೆ. ಭಾರತದಲ್ಲಿ ನಿಜವಾಗಿಯೂ ಅನಂತ ಅವಕಾಶಗಳಿವೆ. ಅವುಗಳನ್ನು ಸಾಕಾರಗೊಳಿಸಿ, ನೈಜ ಫಲಿತಾಂಶಗಳನ್ನು ನೀಡಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ" ಎಂದು ಹೇಳಿದರು.
ಟ್ರಸ್ಟ್ (TRUST) ಫೆಲೊಶಿಪ್‌ಗೆ ಚಾಲನೆ
ರಾಯಭಾರಿ ಗೋರ್ ಅವರು ಈ ಸಂದರ್ಭದಲ್ಲಿ TRUST ಫೆಲೋಶಿಪ್‌ಗೆ ಚಾಲನೆ ನೀಡಿದರು. ಇದು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ಮಹತ್ವದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅತ್ಯುನ್ನತ ಸಂಶೋಧನೆ ನಡೆಸಲು ಅಮೆರಿಕ ಮತ್ತು ಭಾರತದ (india) ಪ್ರಮುಖ ಸಂಶೋಧಕರನ್ನು ಒಗ್ಗೂಡಿಸುವ ಹೊಸ ಸಾರ್ವಜನಿಕ-ಖಾಸಗಿ ಸಹಭಾಗಿತ್ವವಾಗಿದೆ.

ಈ ಫೆಲೋಶಿಪ್‌ನ್ನು ಪ್ರತಿತಿ ಇನ್ವೆಸ್ಟ್‌ಮೆಂಟ್ಸ್‌ನ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಮಜುಂದಾರ್-ಶಾ ಫಿಲಾಂಥ್ರಪಿ ಸಂಸ್ಥೆಯ ಕಿರಣ್ ಮಜುಂದಾರ್-ಶಾ ಅವರ ಉದಾರ ಕೊಡುಗೆಯೊಂದಿಗೆ, ಐಐಟಿ ಮದ್ರಾಸ್ (IIT-M), ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ.
ಈ ತಿಂಗಳಿನಿಂದ ಆರಂಭವಾಗುವ ಕಾರ್ಯಕ್ರಮದಡಿ, ಅಮೆರಿಕದ ಪೋಸ್ಟ್‌ಡಾಕ್ಟರಲ್ ಸಂಶೋಧಕರು ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಬೋಧಕ ಸಿಬ್ಬಂದಿಗೆ, ಭಾರತೀಯ ಸಂಸ್ಥೆಗಳೊಂದಿಗೆ 12 ತಿಂಗಳ ಕಾಲ ಸಹಯೋಗದ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ಫೆಲೋಶಿಪ್ ಭತ್ಯೆ ನೀಡಲಾಗುತ್ತದೆ.
"TRUST ಫೆಲೋಶಿಪ್ ಇನ್ನಷ್ಟು ನಾಯಕರು ಮುಂದೆ ಬಂದು ಕೈಜೋಡಿಸಲು ಪ್ರೇರೇಪಿಸುವ ದಾರಿಯಾಗಬೇಕು ಎಂಬುದು ನನ್ನ ಆಶಯ. ಇದರಿಂದ ಹೆಚ್ಚಿನ ಫೆಲೋಗಳು ಕಾರ್ಯಕ್ರಮಕ್ಕೆ ಸೇರ್ಪಡೆಯಾಗುತ್ತಾರೆ ಮತ್ತು ಹೆಚ್ಚಿನ ಮಹತ್ವದ ಆವಿಷ್ಕಾರಗಳು ಮಾರುಕಟ್ಟೆಗೆ ಬರಲು ಸಾಧ್ಯವಾಗುತ್ತದೆ. ಇಂದು ಇಲ್ಲಿ ಸೇರಿರುವ ನಿಮ್ಮೆಲ್ಲರಿಗೂ ನನ್ನ ಮನವಿ ಒಂದೇ - ಈ ಕಾರ್ಯಕ್ರಮವನ್ನು ಇನ್ನಷ್ಟು ಬೆಳೆಸಲು ನಮಗೆ ಸಹಾಯ ಮಾಡಿ," ಎಂದು ರಾಯಭಾರಿ ಗೋರ್ ಹೇಳಿದರು.
ಅಮೆರಿಕದ ಉದ್ಯಮಗಳಿಗೆ ಬೆಂಬಲ ವಿಸ್ತರಣೆ: ರಾಯಭಾರಿ ಗೋರ್ ಅವರು ಬೆಂಗಳೂರಿನಲ್ಲಿ ಅಮೆರಿಕದ ವಾಣಿಜ್ಯ ಸೇವಾ ಕಚೇರಿಯ (U.S. Commercial Service) ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಘೋಷಿಸಿದರು. ದಕ್ಷಿಣ ಭಾರತದಲ್ಲಿ ಅಮೆರಿಕದ ಕಂಪನಿಗಳು ಸ್ಪರ್ಧಿಸಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ನೆರವಾಗುವ ಉದ್ದೇಶದಿಂದ ರಫ್ತು ಸಲಹೆ, ಮಾರುಕಟ್ಟೆ ಮಾಹಿತಿ ಹಾಗೂ ಪರಿಶೀಲಿತ ಸ್ಥಳೀಯ ಪಾಲುದಾರರೊಂದಿಗೆ ಸಂಪರ್ಕ ಸೇರಿದಂತೆ ಹೆಚ್ಚಿನ ಬೆಂಬಲವನ್ನು ಒದಗಿಸಲಾಗುವುದು.
"ಅಮೆರಿಕದ ಉದ್ಯಮಗಳಿಗೆ ಈ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾದ ಬೆಂಬಲ, ನಿಖರವಾದ ಮಾರುಕಟ್ಟೆ ಮಾಹಿತಿ ಮತ್ತು ಹೆಚ್ಚಿನ ಅವಕಾಶಗಳ ಅಗತ್ಯವಿದೆ. ಈ ವಿಸ್ತರಣೆಯು ಅದನ್ನೇ ಒದಗಿಸುತ್ತದೆ. ಇದರರ್ಥ ಅಮೆರಿಕದ ರಫ್ತು ಹೆಚ್ಚಳ, ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಮತ್ತು ಬೆಂಗಳೂರಿನ ಬೆಳವಣಿಗೆಯಲ್ಲಿ ಅಮೆರಿಕದ ಕಂಪನಿಗಳು ನೇರವಾಗಿ ಪಾಲ್ಗೊಳ್ಳುವುದಾಗಿದೆ " ಎಂದೂ ರಾಯಭಾರಿ ಗೋರ್ ಹೇಳಿದರು.
ಹೊಸ ಎತ್ತರಕ್ಕೆ ತಲುಪುತ್ತಿರುವ ಸಹಭಾಗಿತ್ವ
ಅಮೆರಿಕ-ಭಾರತ ಸಹಭಾಗಿತ್ವದ ಮಹತ್ವಾಕಾಂಕ್ಷೆಯನ್ನು ಬಿಂಬಿಸುವ ಉದಾಹರಣೆಯಾಗಿ ಅಂತರಿಕ್ಷ ಕ್ಷೇತ್ರದಲ್ಲಿನ ಉಭಯ ದೇಶಗಳ ಸಹಕಾರವನ್ನು ರಾಯಭಾರಿ ಗೋರ್ ಉಲ್ಲೇಖಿಸಿದರು. ಇತ್ತೀಚಿನ ಜಂಟಿ ಬಾಹ್ಯಾಕಾಶ ಕಾರ್ಯಾಚರಣೆಗಳು ಹಾಗೂ ಚಂದ್ರನ ಅನ್ವೇಷಣೆ ಕುರಿತು ಎರಡೂ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ಅವರು ಪ್ರಸ್ತಾಪಿಸಿದರು. " ಇನ್ನಷ್ಟು ದೊಡ್ಡದಾಗಿ, ಇನ್ನಷ್ಟು ದಿಟ್ಟವಾಗಿ ಮತ್ತು ಇನ್ನಷ್ಟು ಮಹತ್ವಾಕಾಂಕ್ಷೆಯೊಂದಿಗೆ ಸಾಗುತ್ತಿರುವ ಈ ಸಹಭಾಗಿತ್ವ ಇದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಹೇಳುತ್ತದೆ" ಎಂದು ಅವರು ನುಡಿದರು.
250 ವರ್ಷಗಳ ಸಂಭ್ರಮ
ಅಮೆರಿಕದ (america) ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ ಹಲವು ಪ್ರಮುಖ ಕಟ್ಟಡಗಳನ್ನು ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ದೀಪಗಳಿಂದ ಅಲಂಕರಿಸಲಾಯಿತು. ಇವುಗಳಲ್ಲಿ ಬೋಯಿಂಗ್ ಮತ್ತು ಕಾಲಿನ್ಸ್ ಏರೋಸ್ಪೇಸ್ ಸೇರಿವೆ.
ಸಂಜೆಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಪಾಕಪದ್ಧತಿಯ ವೈವಿಧ್ಯತೆಯನ್ನೂ ಸಂಭ್ರಮಿಸಲಾಯಿತು. ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾರತ ಮತ್ತು ಅಮೆರಿಕದ ರಾಷ್ಟ್ರಗೀತೆಗಳನ್ನು ಪ್ರಸ್ತುತಪಡಿಸಿದರು. ಅಮೆರಿಕದ ವಿದೇಶಿ ಕೃಷಿ ಸೇವೆ (U.S. Foreign Agricultural Service) ಅಮೆರಿಕದ ಪಾಕಪದ್ಧತಿ ಮತ್ತು ಕೃಷಿ ಉತ್ಪನ್ನಗಳನ್ನು ಪರಿಚಯಿಸಿತು. ಸಮಾರಂಭದಲ್ಲಿ ಅಮೆರಿಕದ ಸೇಬು, ಕ್ರ್ಯಾನ್‌ಬೆರಿ, ಪೆಕಾನ್ ಮತ್ತು ಪಿಸ್ತಾಗಳನ್ನು ಬಳಸಿ ತಯಾರಿಸಿದ ವಿವಿಧ ಖಾದ್ಯಗಳನ್ನು ಅತಿಥಿಗಳಿಗೆ ಬಡಿಸಲಾಯಿತು.
"ನಿರ್ಮಿಸಲು, ಸ್ಪರ್ಧಿಸಲು ಮತ್ತು ಗೆಲ್ಲಲು ಇರುವ ಸ್ವಾತಂತ್ರ್ಯ - ಅಮೆರಿಕದ 250 ವರ್ಷಗಳ ಸ್ವಾತಂತ್ರ್ಯವನ್ನು ನಾವು ಸಂಭ್ರಮಿಸೋಣ. ನಮ್ಮ ಎರಡೂ ದೇಶಗಳಿಗೆ ಸ್ಪಷ್ಟ ಮತ್ತು ನೈಜ ಫಲಿತಾಂಶಗಳನ್ನು ನೀಡುತ್ತಿರುವ ಭಾರತದೊಂದಿಗಿನ ಸಹಭಾಗಿತ್ವವನ್ನೂ ಸಂಭ್ರಮಿಸೋಣ," ರಾಯಭಾರಿ ಗೋರ್ ಹೇಳಿದರು.


Click it and Unblock the Notifications
