ಆತ್ಮಾಭಿಮಾನ ಇದ್ದರೆ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ
ನವದೆಹಲಿ, ಆ 21: ಯಾವುದೇ ರಾಜ್ಯದ, ಯಾವುದೇ ಪಕ್ಷದ ಮುಖ್ಯಮಂತ್ರಿಗಳಿಗೆ ಆತ್ಮಭಿಮಾನ ಇದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮದ್ ವಿವಾದಕಾರಿ ಹೇಳಿಕೆ ನೀಡಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಸರಕಾರೀ ಕಾರ್ಯಕ್ರಮಗಳನ್ನು ಪಕ್ಷದ ಕಾರ್ಯಕ್ರಮದಂತೆ ನಡೆಸುತ್ತಿದೆ. ಇದರಿಂದ ಪ್ರಮುಖವಾಗಿ ಕಾಂಗ್ರೆಸ್ ಮುಖ್ಯಮಂತ್ರಿಗಳು ದೂರವಿರುವುದೇ ಒಳ್ಳೆಯದು ಎಂದು ಶಕೀಲ್ ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ.
ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಇಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕಿರುವ ನಿರ್ಧಾರವನ್ನು ಸಮರ್ಥಿಸಿಕೊಂಡ ಶಕೀಲ್ ಅಹಮದ್, ಈ ಇಬ್ಬರು ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಆತ್ಮಭಿಮಾನ ಇದ್ದವರು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಇಬ್ಬರು ಮುಖ್ಯಮಂತ್ರಿಗಳ ಪರವಾಗಿ ಶಕೀಲ್ ನಿಂತಿದ್ದಾರೆ.
ಕೆಲವೊಂದು ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದರ ಲಾಭವನ್ನು ಬಳಸಿಕೊಂಡು ಸರಕಾರೀ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್ ಮುಖ್ಯಮಂತ್ರಿಗಳು ಪ್ರಧಾನಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಶಕೀಲ್ ಅಹಮದ್ ಹೇಳಿದ್ದಾರೆ.
ಮೋದಿ ಕಾರ್ಯಕ್ರಮಕ್ಕೆ ಇಬ್ಬರು ಕಾಂಗ್ರೆಸ್ ಸಿಎಂಗಳ ಬಹಿಷ್ಕಾರ. ಮುಂದೆ ಓದಿ..

ಹರ್ಯಾಣದಲ್ಲಿ ನಡೆದಿದ್ದೇನು?
ಹರ್ಯಾಣದ ಗಡಿ ಭಾಗ ಕೈತಾಳದಲ್ಲಿ ರಾಷ್ಟೀಯ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹರ್ಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಪ್ರಧಾನಿ ಮೋದಿ ಭಾಗವಹಿಸಿದ್ದರು. ರಾಜಸ್ಥಾನ ಮತ್ತು ಕೈತಾಳ ಗಡಿ ಪ್ರಾಂತ್ಯದ 166 ಕಿಲೋಮೀಟರ್ ಉದ್ದದ ಹೆದ್ದಾರಿ ಶಂಕುಸ್ಥಾಪನೆ ನಡೆಸಿ ಮೋದಿ ಭಾಷಣ ಮಾಡಿ, ಕೇಂದ್ರ ಸರಕಾರದ ಮುಂದಿನ ರೂಪುರೇಷೆಯನ್ನು ವಿವರಿಸಿದರು.

ಮೋದಿ ಭಾಷಣದ ನಂತರ ಹರ್ಯಾಣ ಸಿಎಂ ಭಾಷಣ
ಮೋದಿ ಭಾಷಣ ಮುಗಿದ ನಂತರ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಭಾಷಣ ಮಾಡಲಾರಂಭಿಸಿದರು. ಆದರೆ ಅಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹೂಡಾ ಭಾಷಣಕ್ಕೆ ಅಡ್ದಿ ಪಡಿಸಿದರು, ಮೋದಿ ಪರ ಘೋಷಣೆ ಕೂಗಲಾರಂಭಿಸಿದರು. ಮೋದಿ ಸುಮ್ಮನಿರುವಂತೆ ಮನವಿ ಮಾಡಿದರೂ, ಕಾರ್ಯಕರ್ತರು ಸುಮ್ಮನಾಗಲಿಲ್ಲ.

ಶಪಥಗೈದ ಹೂಡಾ
ಇದರಿಂದ ತೀವ್ರ ಮುಜುಗರಕ್ಕೀಡಾದ ಮುಖ್ಯಮಂತ್ರಿ ಹೂಡಾ, ಇನ್ನು ಮುಂದೆ ಪ್ರಧಾನಿ ಮೋದಿ ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ವೇದಿಕೆಯಲ್ಲಿಯೇ ಆಕ್ರೋಶ ವ್ಯಕ್ತ ಪಡಿಸಿ ಕಾರ್ಯಕ್ರಮದಿಂದ ಹೊರನಡೆದರು.

ಇತ್ತ ಮಹಾ ಸಿಎಂ
ಇದಾದ ಒಂದು ದಿನದ ತರುವಾಯ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕೂಡಾ ಮೋದಿ ಭಾಗವಹಿಸುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾಗಪುರ ಮೆಟ್ರೋ ಉದ್ಘಾಟನೆ
ನಾಗಪುರದಲ್ಲಿ ಗುರುವಾರ (ಆ 21) ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಸರಕಾರೀ ಕಾರ್ಯಕ್ರಮವನ್ನು ಮೋದಿ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಮೋದಿ ಭಾಗವಹಿಸುವ ಸಭೆಯಲ್ಲಿ ಹಾಜರು ಇರದೇ ಇರಲು ನಿರ್ಧರಿಸಿದ್ದೇನೆಂದು ಚವಾಣ್ ಹೇಳಿದ್ದಾರೆ.

ಕಾಂಗ್ರೆಸ್ಸಿಗೆ ಮುಜುಗರತಂದ ಸಿದ್ದು ಹೇಳಿಕೆ
ಯಾರೋ ಹೇಳಿದರು ಎಂದು ಪ್ರಧಾನಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲಾಗುವುದಿಲ್ಲ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಆಯಾಯ ರಾಜ್ಯಗಳ ಮುಖ್ಯಮಂತ್ರಿಗಳ ಶಿಷ್ಟಾಚಾರದ ಕ್ರಮ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. (ಸಂಗ್ರಹ ಚಿತ್ರ)












Click it and Unblock the Notifications