Ahmedabad plane crash: ದುರಂತಕ್ಕೀಡಾದ ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ..Vijay Rupani
Ahmedabad plane crash: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂನ್ 12) ಏರ್ ಇಂಡಿಯಾ ವಿಮಾನ ಪತನವಾಗಿದೆ. ಈ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ 12ನೇ ಸೀಟ್‌ನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು ಎಂದು ವರದಿ ಆಗಿದೆ.
242ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೆ ಈಡಾಗಿದೆ. ಸುಮಾರು ಮಧ್ಯಾಹ್ನ 1:50ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ವಿಜಯ್ ರೂಪಾನಿ ಯಾರು?: ವಿಜಯ್ ರೂಪಾನಿ ಒಬ್ಬ ಭಾರತೀಯ ರಾಜಕಾರಣಿ ಆಗಿದ್ದು, ಅವರು ಆಗಸ್ಟ್ 2016ರಿಂದ ಸೆಪ್ಟೆಂಬರ್ 2021ರ ವರೆಗೆ ಗುಜರಾತ್‌ನ 16ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು 1996-1997ರ ವರೆಗೆ ರಾಜ್‌ಕೋಟ್‌ನ ಮೇಯರ್, ರಾಜ್ಯಸಭೆಯಲ್ಲಿ ಸಂಸತ್ ಸದಸ್ಯ (2006-2012) ಹಾಗೂ ಹಲವು ಖಾತೆಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸಿದವರಾಗಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ರಾಜ್‌ಕೋಟ್ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಮತ್ತು ಮುಖ್ಯಮಂತ್ರಿ ಆಗುವ ಮೊದಲು ಗುಜರಾತ್ ಬಿಜೆಪಿಯ ಅಧ್ಯಕ್ಷರೂ ಆಗಿದ್ದರು.
ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು?
* ವಯಸ್ಕರು - 230
* 2 ಶಿಶುಗಳು
* 12 ಸಿಬ್ಬಂದಿ ಸೇರಿಂದ 242ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ವಿಮಾನವು ಮೇಘನಿ ನಗರ ಬಳಿ ಪತನ ಆಗಿದ್ದು, ಆ ಪ್ರದೇಶದಲ್ಲಿ ಭೀತಿಯನ್ನುಂಟು ಮಾಡಿದೆ. ಇನ್ನು ವಿಮಾನ ಪತನವಾದ ಪ್ರದೇಶದ ಸುತ್ತಮುತ್ತ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಇದು ವಿಮಾನ ನಿಲ್ದಾಣದ ಆವರಣದ ಸಮೀಪದಲ್ಲಿ ಸಂಭವಿಸಿದ್ದು, ಅಲ್ಲಿನ ಸ್ಥಳೀಯರ ಮಾಹಿತಿ ಮೇರೆ ಘಟನಾ ಸ್ಥಳಕ್ಕೆ ಆಗಮನಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದೆ. ಹಾನಿ ಅಥವಾ ಸಾವು-ನೋವುಗಳ ಪ್ರಮಾಣದ ಬಗ್ಗೆ ನಿಖರ ಮಾಹಿತಿ ಇನ್ನೂ ತಿಳಿದುಬರಬೇಕಿದೆ ಅಷ್ಟೇ.
ವಿಮಾನ ಅಪಘಾತದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಸಿಎಂ ಮತ್ತು ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಅಗತ್ಯ ಇರುವ ಎಲ್ಲಾ ಸಹಾಯವನ್ನು ಕೇಂದ್ರ ಸರ್ಕಾರ ಮಾಡಲಿದೆ ಭರವಸೆ ಕೊಟ್ಟಿದೆ. ಇನ್ನು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಸಹ ಪರಿಸ್ಥಿತಿಯನ್ನು ಅವಲೋಕಿಸಲು ಅಹಮದಾಬಾದ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications