Bengaluru Cafe Blast: ಶೋಭಾ ಕರಂದ್ಲಾಜೆ ಕ್ಷಮೆ ಕೇಳಿದರೆ ಕೇಸ್ ರದ್ದು: ಹೈಕೋರ್ಟ್‌ಗೆ ಎಜಿ ಮಾಹಿತಿ
ನವದೆಹಲಿ, ಆಗಸ್ಟ್ 08: ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದ ಆಗಂತುಕರ ಬಂಧನವಾಗಿದೆ. ಈ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಂಕಷ್ಟ ಎದುರಾಗಿದೆ. ತಮಿಳುನಾಡಿನಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಗಾದರೆ ಅವರು ನೀಡಿದ್ದ ಹೇಳಿಕೆ ಏನು?, ಮದ್ರಾಸ್ ಹೈಕೋರ್ಟ್ ತಿಳಿಸಿದ್ದೇನು? ಎಂಬ ಮಾಹಿತಿ ಇಲ್ಲಿದೆ.
ಎಸ್‌ಐಟಿ ಬಂಧಿತ ಆರೋಪಿಗಳು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಸ್ಪೋಟಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿತ್ತು. ರಾಜಕೀಯ ರಂಗದಲ್ಲೂ ಚರ್ಚೆಯಾಗಿದೆ. ಈ ವೇಳೆ ಪ್ರಕರಣ ಸಂಬಂಧ ಮಾತನಾಡಿದ್ದ ಕೆಂದ್ರ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ''ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ'' ಎಂದು ಹೇಳಿಕೆ ನೀಡಿದ್ದರು. ಇದು ಅವರಿಗೀಗ ಸಂಕಟ ತಂದೊಡ್ಡಿದೆ.

ಈ ಸಂಬಂಧ ತಮಿಳುನಾಡಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಬುಧವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ತಮಿಳುನಾಡು ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಅವರು, ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆ ಕುರಿತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ಕೊಟ್ಟು ಕ್ಷಮೆಯಾಚಿಸಿದರೆ ಪ್ರಕರಣ ರದ್ದುಗೊಳಿಸಬಹುದು ಎಂದು ಹೈಕೋರ್ಟ್‌ಗೆ ತಿಳಿಸಿದರು.
ಕ್ಷಮೆ ಕೇಳದಿದ್ದರೆ ಕಾನೂನಾತ್ಮಕ ಕ್ರಮ
ಒಂದು ವೇಳೆ ತಮ್ಮ ಹೇಳಿಕೆ ಕುರಿತು ಕ್ಷಮಾಪಣೆ ಕೇಳದಿದ್ದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವ ಕುರಿತು ನ್ಯಾಯಪೀಠವನ್ನು ಕೇಳಿದರು. ಅಲ್ಲದೇ ನಮಗೆ ಉನ್ನತ ಮಟ್ಟದಿಂದ ಅನುಮತಿ ದೊರೆತಿದ್ದು, ಒಂದು ವೇಳೆ ಸಚಿವರು ಪತ್ರಿಕಾಗೋಷ್ಠಿಯನ್ನು ಕರೆದು ಕ್ಷಮೆಯಾಚಿಸಿದರೆ ಪ್ರಕರಣವನ್ನು ಕೈಬಿಡಬಹುದಾಗಿದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ತಾವು ಕರಡು ಕ್ಷಮಾಪಣೆ ಸಿದ್ಧಪಡಿಸಿರುವುದಾಗಿ ಕೋರ್ಟ್ ಗೆ ತಿಳಿಸಿದರು.
ಎಜಿಯ 'ಕರಡು ಕ್ಷಮಾಪಣಾ ಪತ್ರ'ದಲ್ಲಿ ಏನಿದೆ?
ಈ ಕರಡು ಕ್ಷಮಾಪಣೆಯಲ್ಲಿ 'ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಯ ಕುರಿತು 2024ರ ಮಾರ್ಚ್ 19 ರಂದು ಸುದ್ದಿಗೋಷ್ಠಿಯಲ್ಲಿ ಹೇಳುವಾಗ ತಮಿಳುನಾಡಿನ ಜನರ ಬಗ್ಗೆ ನಾನು ಮಾಡಿದ ಟೀಕೆಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ನಮ್ಮ ಹೇಳಿಕೆ ಅಸಮಂಜಸವಾಗಿದೆ. ಎಲ್ಲ ಸಂಸ್ಕೃತಿಗಳ ವೈವಿಧ್ಯತೆ ಮತ್ತು ಶ್ರೀಮಂತಿಕೆಗೆ, ವಿಶೇಷವಾಗಿ ತಮಿಳುನಾಡಿನ ಜನರಿಗೆ ನಾನು ಗೌರವ ಕೊಡುತ್ತೇನೆ. ನನ್ನ ಹೇಳಿಕೆಯಿಂದ ಅವರಿಗೆ ತೊಂದರೆ ಆಗಿದ್ದನ್ನು ಅರ್ಥ ಮಾಡಿಕೊಂಡು ಕ್ಷಮೇಯಾಚಿಸುತ್ತಿದ್ದೇನೆ' ಎಂದು ಬರೆಯಲಾಗಿದೆ.
ಇದಕ್ಕೆ ಕೇಂದ್ರ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಒಪ್ಪಿಗೆ ಕ್ಷಮಾಪಣೆ ಕೇಳಿದಲ್ಲಿ, ಪ್ರಕರಣ ಸುಖಾಂತ್ಯಗೊಳ್ಳಲಿದೆ. ಇಲ್ಲವಾದರೆ ಕಾನೂನು ಪ್ರಕ್ರಿಯೆ ಅವರು ಎದುರಿಸಬೇಕಾಗುತ್ತದೆ ಎಂಬುದನ್ನು ಅವರು ತಿಳಿಸಿದರು.












Click it and Unblock the Notifications