'ಭಾರತ್ ಜೋಡೋ' ಬಳಿಕ 'ಹಾಥ್ ಸೇ ಹಾಥ್ ಜೋಡೋ' ಯಾತ್ರೆಗೆ ಕಾಂಗ್ರೆಸ್ ಸಿದ್ಧತೆ: ಪ್ರಿಯಾಂಕಾ ನೇತೃತ್ವ
ನವದೆಹಲಿ, ಡಿಸೆಂಬರ್ 03: ಒಂಬತ್ತು ದಿನಗಳ ವಿರಾಮದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ಇಂದು ಉತ್ತರ ಪ್ರದೇಶದಿಂದ ಪುನರಾರಂಭಗೊಂಡಿದೆ. ಯಾತ್ರೆಯು 110 ದಿನಗಳಿಗಿಂತ ಹೆಚ್ಚು ಕ್ರಮಿಸಿದ್ದ. ಇದುವರೆಗೆ 3,000 ಕಿ.ಮೀ ಸಾಗಿದೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣ, ದೆಹಲಿಗಳಲ್ಲಿ ಸಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.
ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿ ನಡೆಸಿದ ಕಾಲ್ನಡಿಗೆಯಲ್ಲಿ ಅತಿ ಉದ್ದದ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಹಾಥ್ ಸೇ ಹಾಥ್ ಜೋಡೋ' ಯಾತ್ರೆಗೆ ಕಾಂಗ್ರೆಸ್ ಸಿದ್ಧತೆ
ಜನವರಿ 26 ರಂದು ಶ್ರೀನಗರದಲ್ಲಿ ಕೊನೆಗೊಳ್ಳುವ ಯಾತ್ರೆಯ ನಂತರ, 'ಹಾಥ್ ಸೇ ಹಾಥ್ ಜೋಡೋ' ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಲಿದೆ.
ಪಕ್ಷದ ಮೂಲಗಳ ಪ್ರಕಾರ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 'ಹಾಥ್ ಸೇ ಹಾಥ್ ಜೋಡೋ' ಅಭಿಯಾನವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ಹಾಥ್ ಸೇ ಹಾಥ್ ಜೋಡೋ ಯಾತ್ರೆಗೆ ಪ್ರಿಯಾಂಕಾ ನೇತೃತ್ವ
'ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಎರಡು ತಿಂಗಳ 'ಹಾಥ್ ಸೇ ಹಾಥ್ ಜೋಡೋ ಅಭಿಯಾನ'ವನ್ನು ಪ್ರಾರಂಭಿಸಲಿದೆ. ಈ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ ಅವರು ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗಳನ್ನು ಮುನ್ನಡೆಸಲಿದ್ದಾರೆ. 'ಭಾರತ್ ಜೋಡೋ ಯಾತ್ರೆ'ಯ ಸಂದೇಶವನ್ನು ಹರಡಲು ಈ ಅಭಿಯಾನವನ್ನು ರೂಪಿಸಲಾಗಿದೆ' ಎಂದು ತಿಳಿಸಿದ್ದಾರೆ
ಪ್ರಿಯಾಂಕಾ ಗಾಂಧಿ ಅವರು ಮಹಿಳಾ ಕಾರ್ಯಕರ್ತರೊಂದಿಗೆ ಮಾರ್ಚ್‌ನಲ್ಲಿ ಈ ಅಭಿಯಾನವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆಯಲ್ಲಿ ವಿಪಕ್ಷ ನಾಯಕರು ಭಾಗಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ಉತ್ತರ ಪ್ರದೇಶದಲ್ಲಿದೆ. ಯಾತ್ರೆಗೆ ವಿರೋಧ ಪಕ್ಷಗಳ ನಾಯಕರು ಜೊತೆಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಯಾತ್ರೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಭಾಗಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಶಿವಸೇನಾ ಯುವನಾಯಕ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಲೆ ಪಾಲ್ಗೊಂಡಿದ್ದರು.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಯಾತ್ರೆಗೆ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ಅವರು ಯಾತ್ರೆಗೆ ಶುಭ ಹಾರೈಸಿದ್ದಾರೆ. ಯಾತ್ರೆಯಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ. ಕಾಶ್ಮೀರದಲ್ಲಿ ನಡೆಯುವ ಯಾತ್ರೆಗೆ ಪಿಡಿಪಿ ನಾಯಕಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಅವರಿಗೆ ಆಮಂತ್ರಣ ನೀಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ
ಕೋಮುದ್ವೇಷ, ಬೆಲೆ ಏರಿಕೆ, ನಿರುದ್ಯೋಗ ಹಾಗೂ ಚೀನಾ ಉಪಟಳಗಳಂತ ಜ್ವಲಂತ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದಾರೆ. ಯಾತ್ರೆಯುದ್ದಕ್ಕೂ ಮೋದಿ ನೇತೃತ್ವ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದಿದ್ದ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ರಾಜಘಾಟ್‌ಗೆ ಭೇಟಿ ನೀಡಿದ್ದ ರಾಹುಲ್, ಮಹಾತ್ಮ ಗಾಂಧಿ, ಸರ್ಧಾರ್ ಪಟೇಲ್, ಪಂಡಿತ್ ಜವಾಹರಲಾಲ್ ನೆಹರು ಸೇರಿದಂತೆ ದೇಶದ ಅಗ್ರಗಣ್ಯ ನಾಯಕರಿಗೆ ಗೌರವ ಸಲ್ಲಿಸಿದ್ದರು.












Click it and Unblock the Notifications