ಚೆನ್ನೈ ಮೆಟ್ರೋ ಅಭಿವೃದ್ದಿಗೆ 2,900 ಕೋಟಿ ರೂ ಸಾಲ ಅನುಮೋದಿಸಿದ ಎಡಿಬಿ !
ಚೆನ್ನೈ,ಜನವರಿ 4: ಭಾರತದಲ್ಲಿಯೇ ನಾಲ್ಕನೇ ಅತಿ ಉದ್ದವಾದ ಮೆಟ್ರೋ ಜಾಲ ಹೊಂದಿರುವ ಚೆನ್ನೈ ಮೆಟ್ರೋ ಮಾರ್ಗಗಳ ಅಭಿವೃದ್ದಿಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಸುಮಾರು 2,900 ಕೋಟಿ ರೂ ಮೊತ್ತವನ್ನು ಸಾಲದ ರೂಪದಲ್ಲಿ ನೀಡುವ ಕುರಿತು ಭಾರತ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಚೆನ್ನೈನಲ್ಲಿ ಮೂರು ಹೊಸ ಮೆಟ್ರೋ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ 6,450 ಕೋಟಿ ರೂ ಸಾಲ ನೀಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಅನುಮೋದಿಸಿದ ಯೋಜನೆಯ ಭಾಗವಾಗಿ ಮೊದಲ ಕಂತು 2,900 ಕೋಟಿ ರೂಪಾಯಿ ಬಿಡುಗಡೆ ಮಾಡಲು ಈಗ ಸಿದ್ದವಾಗಿದೆ.
ಹಣಕಾಸು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಜತ್ ಕುಮಾರ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದು, ಈ ಯೋಜನೆಯಿಂದ ಚೆನ್ನೈನ ಕೇಂದ್ರ ಪ್ರದೇಶಗಳ ಸಂಪರ್ಕವನ್ನು ನಗರದ ದಕ್ಷಿಣ ಮತ್ತು ಪಶ್ಚಿಮದ ಪ್ರಮುಖ ಸ್ಥಳಗಳಿಗೆ ವಿಸ್ತರಿಸಲಾಗುವುದರ ಜೊತೆಗೆ ನಿತ್ಯವು ಬಸ್ ಸೇವೆ ಪಡೆಯುತ್ತಿರುವ ಪ್ರಯಾಣಿಕರಿಗೆ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಹೂಡಿಕೆ ಯೋಜನೆಯ ಭಾಗವಾಗಿ ನಗರದಲ್ಲಿ 3, 4 ಮತ್ತು 5 ಲೈನ್ (ಮೂರು) ಹೊಸ ಮೆಟ್ರೋ ಮಾರ್ಗಗಳ ಅಭಿವೃದ್ಧಿ ಪಡಿಸಲಾಗುವುದು. ಮೂರನೇ ಮಾರ್ಗವು ಸುಮಾರು 10.1ಕಿ.ಮೀ ವಿಸ್ತರಿಸುವ ಮೂಲಕ ಒಂಬತ್ತು ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಂತೆ ಶೋಲಿಂಗನಲ್ಲೂರ್ ನಿಂದ ತಮಿಳುನಾಡಿನ ಕೈಗಾರಿಕೆಗಳ ಉತ್ತೇಜನಕ್ಕೆ ಪೂರಕವಾಗಲಿದೆ. ನಾಲ್ಕನೇ ಮಾರ್ಗದ 10.1ಕಿ.ಮೀ ವಿಸ್ತರಣೆಯು ಸುರಂಗ ಮಾರ್ಗದ ಮೂಲಕ ಲೈಟ್‌ಹೌಸ್ ಮತ್ತು ಮೀನಾಕ್ಷಿ ಕಾಲೇಜಿನ ಮೂಲಕ ಒಂಬತ್ತು ನಿಲ್ದಾಣಗಳನ್ನು ತಲುಪಲಿದೆ. 5ನೇ ಮಾರ್ಗವು ಚೆನ್ನೈ ಮೊಫುಸಿಲ್ ಬಸ್ ಟರ್ಮಿನಸ್ ಮತ್ತು ಒಕ್ಕಿಯಂ ತೊರೈಪಾಕ್ಕಂ ನಡುವೆ ಸಂಪರ್ಕಿಸಲಿದೆ.
ಈ ಅಭಿವೃದ್ದಿ ಯೋಜನೆಯ ಭಾಗವಾಗಿ ಮೆಟ್ರೋ ಕೇಂದ್ರಗಳು ವಿಪತ್ತು ಮತ್ತು ಹವಾಮಾನ-ನಿರೋಧಕ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ. ವೃದ್ಧರು, ಮಹಿಳೆಯರು, ಮಕ್ಕಳು, ವಿಕಲಚೇತನರ ಅಗತ್ಯಗಳಿಗೆ ಸ್ಪಂದಿಸಲಿವೆ. ಅಷ್ಟೇ ಅಲ್ಲದೇ, ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಗಳಿಂದ ಹಲವಾರು ಜನರಿಗೆ ಉದ್ಯೋಗ ಅವಕಾಶಗಳು ಒದಗಿ ಬರಲಿದ್ದು, ಮೋಟಾರು ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಿ ನಗರ ವಾಸಯೋಗ್ಯವಾಗಲಿದೆ ಎಂದು ಎಡಿಬಿಯ ಅಧಿಕಾರಿ ನಿಲಯ ಮಿತಾಶ್ ಹೇಳಿದರು.

ಮೆಟ್ರೋ ರೈಲು ಕಾರಿಡಾರ್‌ಗಳ ಉದ್ದಕ್ಕೂ ಮಲ್ಟಿಮೋಡಲ್ ಇಂಟರ್‌ಚೇಂಜ್‌ಗಳು ಮತ್ತು ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳು, ಆಶ್ರಯ ಪಡೆಯುವ ಪ್ರದೇಶಗಳು, ಬೈಸಿಕಲ್ ಸೌಲಭ್ಯಗಳು ಮತ್ತು ಪ್ರಯಾಣಿಕರಿಗೆ ಅಗತ್ಯವಾದ ಮಾಹಿತಿ ವದಗಿಸುವ ಸೌಲಭ್ಯಗಳನ್ನು ಯೋಜನೆಯ ಭಾಗವಾಗಿ ನಿರ್ಮಿಸಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.












Click it and Unblock the Notifications