ದಿವ್ಯಾಂಗ ಮಹಿಳೆಯರೊಂದಿಗೆ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿದ ದಿವಾ–ಜೀತ್ ಅದಾನಿ ದಂಪತಿ
ದಿವಾ ಮತ್ತು ಜೀತ್ ಅದಾನಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸುವ ಜೊತೆಗೆ ಸಮಾಜಮುಖಿ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ. ಅವರ ವಿವಾಹದ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ 'ಅದಾನಿ ಮಂಗಳ ಸೇವಾ' ಉಪಕ್ರಮ ಒಂದು ವರ್ಷ ಪೂರ್ಣಗೊಳಿಸಿರುವ ಪ್ರಯುಕ್ತ, ದಿವ್ಯಾಂಗ ಮಹಿಳೆಯರೊಂದಿಗೆ ಈ ವಿಶೇಷ ದಿನವನ್ನು ಆಚರಿಸಲಾಯಿತು.
ಗುಜರಾತ್‌ನ ಅಹಮದಾಬಾದ್‌ನ ಶಾಂತಿಗ್ರಾಮದಲ್ಲಿರುವ ಬೆಲ್ವೆಡೇರ್ ಕ್ಲಬ್ ಲಾನ್‌ನಲ್ಲಿ ಗುರುವಾರ ಸಂಜೆ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಕಲಚೇತನ ಮಹಿಳೆಯರು, ಅವರ ಕುಟುಂಬದ ಸದಸ್ಯರು, ಅದಾನಿ ಫೌಂಡೇಶನ್‌ನ ಪ್ರತಿನಿಧಿಗಳು ಸೇರಿ ಉಪಕ್ರಮದ ಒಂದು ವರ್ಷದ ಪ್ರಗತಿ ಮತ್ತು ಪರಿಣಾಮಗಳ ಬಗ್ಗೆ ಚರ್ಚಿಸಿದರು. 2025ರ ಫೆಬ್ರವರಿ 7ರಂದು ದಿವಾ-ಜೀತ್ ಅದಾನಿ ಅವರ ವಿವಾಹದ ಮುನ್ನವೇ ಆರಂಭಗೊಂಡ ಈ ಯೋಜನೆಯು, ವೈಯಕ್ತಿಕ ಸಂಭ್ರಮವನ್ನು ದೀರ್ಘಕಾಲಿಕ ಸಾಮಾಜಿಕ ಹೊಣೆಗಾರಿಕೆಗೆ ರೂಪಾಂತರಿಸುವ ಉದ್ದೇಶ ಹೊಂದಿತ್ತು.

ಅದಾನಿ ಮಂಗಳ ಸೇವಾ ಯೋಜನೆಯಡಿ ಮೊದಲ ವರ್ಷದಲ್ಲಿ 500 ದಿವ್ಯಾಂಗ ಮಹಿಳೆಯರಿಗೆ ಆರ್ಥಿಕ ಬೆಂಬಲ ಒದಗಿಸಲಾಗಿದೆ. ಪ್ರತಿಯೊಬ್ಬ ಫಲಾನುಭವಿಗೂ ₹10 ಲಕ್ಷ ಮೌಲ್ಯದ ಸ್ಥಿರ ಠೇವಣಿ ನೀಡಲಾಗಿದ್ದು, ಈ ಠೇವಣಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಸೃಷ್ಟಿಸಲಾಗಿದೆ. ಈ ವ್ಯವಸ್ಥೆ ಮೂಲಕ ಮಹಿಳೆಯರಿಗೆ ನಿಶ್ಚಿತ ಮಾಸಿಕ ಆದಾಯ ಲಭ್ಯವಾಗುವುದರ ಜೊತೆಗೆ, 10 ವರ್ಷಗಳ ನಂತರ ಮೂಲಧನವನ್ನು ಪಡೆದುಕೊಳ್ಳುವ ಅವಕಾಶವಿದ್ದು, ದೀರ್ಘಕಾಲಿಕ ಆರ್ಥಿಕ ಭದ್ರತೆ ಮತ್ತು ಆತ್ಮಗೌರವವನ್ನು ಒದಗಿಸುವುದು ಇದರ ಉದ್ದೇಶ.
ಈ ಯೋಜನೆಯನ್ನು ಅದಾನಿ ಗ್ರೂಪ್‌ನ ಸಾಮಾಜಿಕ ಸೇವಾ ವಿಭಾಗವಾದ ಅದಾನಿ ಫೌಂಡೇಶನ್ ಮುನ್ನಡೆಸುತ್ತಿದೆ. 25ರಿಂದ 40 ವರ್ಷದ ವಯಸ್ಸಿನ ದಿವ್ಯಾಂಗ ಮಹಿಳೆಯರನ್ನು 'ಯೂತ್ ಫಾರ್ ಜಾಬ್ಸ್' ಎಂಬ ಸಹಭಾಗಿತ್ವ ಸಂಸ್ಥೆಯ ಮೂಲಕ ಗುರುತಿಸಲಾಗಿದ್ದು, ಯುನಿಕ್ ಡಿಸೆಬಿಲಿಟಿ ಐಡಿ (UDID) ಹೊಂದಿರುವವರನ್ನೇ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ.

ಕನಿಷ್ಠ ಐದು ವರ್ಷಗಳ ಕಾಲ ಈ ಯೋಜನೆಯನ್ನು ಮುಂದುವರಿಸುವ ಗುರಿ ಹೊಂದಿರುವುದಾಗಿ ಫೌಂಡೇಶನ್ ತಿಳಿಸಿದೆ. ಪ್ರತಿ ವರ್ಷ 500 ದಿವ್ಯಾಂಗ ಮಹಿಳೆಯರಿಗೆ ಸಹಾಯ ಒದಗಿಸಲಾಗಿದ್ದು, ವಾರ್ಷಿಕವಾಗಿ ಸುಮಾರು ₹50 ಕೋಟಿ ಅನುದಾನ ಮೀಸಲಿಡಲಾಗುತ್ತದೆ. ಇದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ "ಸೇವೆ ನಿರಂತರವಾಗಿರಬೇಕು, ಕೇವಲ ಸಂಕೇತವಾಗಿರಬಾರದು" ಎಂಬ ತತ್ವದ ಪ್ರತಿಬಿಂಬವಾಗಿದೆ ಎಂದು ತಿಳಿಸಲಾಗಿದೆ.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸ್ಥಿರ ಠೇವಣಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜೊತೆಗೆ ಅಹಮದಾಬಾದ್‌ನ ಬ್ಲೈಂಡ್ ಪೀಪಲ್ಸ್ ಅಸೋಸಿಯೇಷನ್ ವತಿಯಿಂದ ಗರ್ಬಾ ನೃತ್ಯ ಹಾಗೂ ಫ್ಯೂಷನ್ ಸಂಗೀತ ಪ್ರದರ್ಶನಗಳು ನಡೆದವು. ಪ್ರಾರ್ಥನೆ ಮತ್ತು ಆತ್ಮಪರಿಶೀಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಯೋಜನೆಯ ಉದ್ದೇಶಗಳು ಮತ್ತು ಅದರ ಸಾಮಾಜಿಕ ಪರಿಣಾಮಗಳ ಕುರಿತು ಚರ್ಚೆ ನಡೆದವು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಗೌತಮ್ ಅದಾನಿ ಅವರು ದಿವಾ ಮತ್ತು ಜೀತ್ ಅದಾನಿ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ, ಅದಾನಿ ಮಂಗಳ ಸೇವಾ ಯೋಜನೆಯ ಮೂಲಕ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ, ಗೌರವ ಮತ್ತು ಹೊಸ ಆಶಾಕಿರಣ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು. ಫಲಾನುಭವಿಗಳ ಜೀವನದಲ್ಲಿ ನಗು ಮತ್ತು ಆತ್ಮವಿಶ್ವಾಸ ಮರಳಿಸುವ ತೃಪ್ತಿಯೇ ನಿಜವಾದ ಯಶಸ್ಸಿಗಿಂತ ದೊಡ್ಡದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅದಾನಿ ಫೌಂಡೇಶನ್ ಅಧ್ಯಕ್ಷೆ ಡಾ.ಪ್ರೀತಿ ಅದಾನಿ, ವೈಯಕ್ತಿಕ ಸಂತೋಷವು ಸಮಾಜದ ಸಮೂಹ ಹಿತಕ್ಕಾಗಿ ಹಂಚಿಕೊಂಡಾಗಲೇ ಅದರ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು. ಅದಾನಿ ಮಂಗಳ ಸೇವಾ ಕೇವಲ ಒಂದು ಯೋಜನೆ ಅಲ್ಲ, ಅದು ದಿವ್ಯಾಂಗ ಮಹಿಳೆಯರ ಶಕ್ತಿ, ಸ್ಥೈರ್ಯ ಮತ್ತು ಗೌರವದ ಮೇಲೆ ಇಟ್ಟಿರುವ ನಂಬಿಕೆಯ ಅಭಿವ್ಯಕ್ತಿ ಎಂದರು.
ಜೀತ್ ಅದಾನಿ ಮಾತನಾಡಿ, ಈ ಉಪಕ್ರಮವು ಶಾಂತವಾಗಿ ಆದರೆ ದೀರ್ಘಕಾಲ ಉಳಿಯುವ ಬೆಂಬಲದ ರೂಪವಾಗಿದ್ದು, ಕುಟುಂಬವಾಗಿ ಈ ಹೊಣೆಗಾರಿಕೆಯನ್ನು ಮುಂದುವರಿಸುವ ಸಂಕಲ್ಪ ನಮ್ಮದು ಎಂದರು. ದಿವಾ ಅದಾನಿ ಮಾತನಾಡಿ, ಆರ್ಥಿಕ ಭದ್ರತೆ ತಾತ್ಕಾಲಿಕವಾಗಿರಬಾರದು ಮತ್ತು ಗೌರವ ಯಾವ ಸಂದರ್ಭದಲ್ಲೂ ಅವಲಂಬಿತವಾಗಿರಬಾರದು ಎಂಬ ನಂಬಿಕೆಯಿಂದಲೇ ಈ ಯೋಜನೆ ರೂಪುಗೊಂಡಿದೆ ಎಂದು ಹೇಳಿದರು.
ಇದೇ ವೇಳೆ, ಅದಾನಿ ಮಂಗಳ ಸೇವಾ ಯೋಜನೆಯ ಮೂಲಕ ಸಂಭವಿಸಿದ ಬದಲಾವಣೆಗಳ ಕಥನಗಳನ್ನು ಒಳಗೊಂಡ ಪುಸ್ತಕವೊಂದನ್ನು ಗೌತಮ್ ಅದಾನಿ ಬಿಡುಗಡೆ ಮಾಡಿದರು. ಸಮುದಾಯ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅದಾನಿ ಮಂಗಳ ಸೇವಾ, ವೈಯಕ್ತಿಕ ಜೀವನದ ಮಹತ್ವದ ಕ್ಷಣಗಳನ್ನು ದೀರ್ಘಕಾಲಿಕ ಸಾಮಾಜಿಕ ಸೇವೆಗೆ ರೂಪಾಂತರಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ. ಇದು ಅದಾನಿ ಫೌಂಡೇಶನ್‌ನ "ಸಮೃದ್ಧಿ ಮತ್ತು ಸೇವೆ ಅವಿಭಾಜ್ಯ" ಎಂಬ ತತ್ವವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.












Click it and Unblock the Notifications