Adani Group: ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಅದಾನಿ ಗ್ರೂಪ್: ಸಿಎಂ ಪರಿಹಾರ ನಿಧಿಗೆ ₹11 ಕೋಟಿ ದೇಣಿಗೆ
Adani Group: ಇದೀಗ ದೇಶದ ಹಲವೆಡೆ ಭಾರಿ ಮಳೆ ಮುಂದುವರೆದಿರುವ ಪರಿಣಾಮ ಪ್ರವಾಹದಂತಹ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದ ಜನರು ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ಈಗಾಗಲೇ ದೊಡ್ಡ ದೊಡ್ಡ ಫೌಂಡೇಶನ್‌ಗಳು ಇವರ ನೆರವಿಗೆ ಧಾವಿಸಿವೆ. ಹಾಗೆಯೇ ಇದೀಗ ಅದಾನಿ ಗ್ರೂಪ್ ಸಹ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಅಸ್ಸಾಂನಲ್ಲಿ ಸಂಭವಿಸಿರುವ ನೆರೆ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು 11 ಕೋಟಿ ರೂಪಾಯಿಳನ್ನು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಇಲ್ಲಿನ ಸಿಎಂ ಧನ್ಯವಾದ ತಿಳಿಸಿದ್ದಾರೆ.

ಅದಾನಿ ಗ್ರೂಪ್‌ಗೆ ಧನ್ಯವಾದ ತಿಳಿಸಿದ ಅಸ್ಸಾಂ ಸಿಎಂ
ಈ ದೇಣಿಗೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆ ಮೂಲಕ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಈ ಆರ್ಥಿಕ ನೆರವು ರಾಜ್ಯದ ಪರಿಹಾರ ಕಾರ್ಯಗಳಿಗೆ ಹೊಸ ಶಕ್ತಿ ನೀಡಲಿದೆ. ಇದು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಾವಿರಾರು ಕುಟುಂಬಗಳಿಗೆ ತಲುಪಲಿದೆ ಎಂದು ತಿಳಿಸುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಪ್ರವಾಹ ಪರಿಹಾರ ಕಾರ್ಯಕ್ರಮ
ಈ ದೇಣಿಗೆಯ ಜೊತೆಗೆ ಅದಾನಿ ಗ್ರೂಪ್‌ನ ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ ಸಂಸ್ಥೆಯಾದ ಅದಾನಿ ಫೌಂಡೇಶನ್, ಅಸ್ಸಾಂ ಭಾಗದಲ್ಲಿ ಬೃಹತ್ ಉಚಿತ ಪ್ರವಾಹ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಗುವಾಹಾಟಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮತ್ತು ಅದಾನಿ ಸ್ಮಾರ್ಟ್ ಮೀಟರ್ ಸಂಸ್ಥೆಗಳ ಸಹಯೋಗದೊಂದಿಗೆ ಈ ನೆರವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.
8,000 ಕುಟುಂಬಗಳಿಗೆ ಪರಿಹಾರ ಕಿಟ್‌ಗಳ ವಿತರಣೆ
ಶಿವಸಾಗರ ಜಿಲ್ಲೆಯ ನಜೀರಾ ಉಪ-ವಿಭಾಗ ಹಾಗೂ ಧೇಮಾಜಿ ಜಿಲ್ಲೆಯ ಸಿಲಾಪಥಾರ್‌ನಲ್ಲಿ ಸುಮಾರು 8,000 ಕುಟುಂಬಗಳಿಗೆ ಪರಿಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಪ್ರವಾಹ ಸಂತ್ರಸ್ತ ಕುಟುಂಬಗಳು ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ನೆರವಾಗುವಂತೆ ಪ್ರತಿಯೊಂದು ಕಿಟ್‌ನಲ್ಲಿ ಅಗತ್ಯ ಆಹಾರ ಧಾನ್ಯಗಳು, ಔಷಧಿಗಳು ಹಾಗೂ ನೈರ್ಮಲ್ಯ ಮತ್ತು ಸ್ವಚ್ಛತಾ ಸಾಮಗ್ರಿಗಳನ್ನೊಳಗೊಂಡ ಪೂರಕ ವಸ್ತುಗಳನ್ನು ನೀಡಲಾಗುತ್ತಿದೆ.
ಈ ಮಹತ್ವದ ಕಾರ್ಯವನ್ನು ನಜಿರಾ ಪ್ರದೇಶದ 14 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅವುಗಳೆಂದರೆ ಗುರ್ಮುರ್ ಮಿರಿ (ನೇಪಾಳಿ ಬಸ್ತಿ), ಸಂತಕ್ ಗ್ರಾಂಟ್, ಬಲಿಗಾಂವ್, ರೋಜಾಪೂಲ್ ದುವಾರಾ ಗಾಂವ್, ಬಮುನ್‌ಪುಖುರಿ, ಗೊಹೈನ್ ಗಾಂವ್ (ಕೊಮೋಲ್ ಸಪೋರಿ), ಹುಲಾಂಗ್ ಕಟೋನಿ, ಹುಲಾಂಗ್ ಕಲಿತಾ, ಬೆಂಗ್‌ಮೋರಾ ಕೊನ್ವಾರ್ ಗಾಂವ್, ಬೈಲುಂಗ್ ಗಾಂವ್, ಮಿರಿ ಗಾಂವ್, ಔಗುರಿಜಾನ್ ಹಾಗೂ ಬಿಹುಬೋರ್ ಗ್ರಾಂಟ್. ಇದರ ಜೊತೆಗೆ ಸಿಲಾಪಥಾರ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೂ ನೆರವು ನೀಡಲಾಗುತ್ತಿದೆ. ಶಿವಸಾಗರ ಮತ್ತು ಧೇಮಾಜಿ ಜಿಲ್ಲೆಗಳಲ್ಲಿರುವ ದೂರದ ಹಾಗೂ ತಲುಪಲು ಕಷ್ಟಸಾಧ್ಯವಾದ ಪ್ರದೇಶಗಳಿಗೂ ಪರಿಹಾರ ವಸ್ತುಗಳು ತಲುಪುವಂತೆ ಮಾಡಲು ಕಾರ್ಯಾಚರಣೆ ನಡೆಸುತ್ತಿರುವ ತಂಡಗಳು ಶ್ರಮಿಸುತ್ತಿವೆ.
ಅದಾನಿ ಫೌಂಡೇಶನ್‌ಗೆ ಈ ಪರಿಹಾರ ಕಾರ್ಯವು ಮೊದಲ ಹೆಜ್ಜೆ ಮಾತ್ರ. ಅಸ್ಸಾಂನಾದ್ಯಂತ ಪ್ರವಾಹ ಪೀಡಿತ ಕುಟುಂಬಗಳು ತಮ್ಮ ಜೀವನವನ್ನು ಮರುನಿರ್ಮಿಸಿಕೊಳ್ಳಲು ಆರಂಭಿಸಿರುವ ಈ ಸಂದರ್ಭದಲ್ಲಿ ಅವರ ದೀರ್ಘಕಾಲೀನ ಪುನರ್ವಸತಿ ಹಾಗೂ ಜೀವನ ಪುನರ್‌ನಿರ್ಮಾಣಕ್ಕೆ ನಿರಂತರ ಬೆಂಬಲ ನೀಡಲಾಗುವುದು. ಜೊತೆಗೆ ಮುಂಬರುವ ಸವಾಲುಗಳನ್ನು ಎದುರಿಸುವಷ್ಟು ಸದೃಢ ಮತ್ತು ಸ್ವಾವಲಂಬಿ ಸಮುದಾಯಗಳನ್ನು ರೂಪಿಸಲು ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.


Click it and Unblock the Notifications
