Vijay: ನಟ, ರಾಜಕಾರಣಿ ವಿಜಯ್ ಪತ್ನಿ ಸಂಗೀತಾರಿಂದ ವಿಚ್ಛೇದನಕ್ಕೆ ಅರ್ಜಿ: ನಟಿಯೊಂದಿಗೆ ವಿವಾಹೇತರ ಸಂಬಂಧ ಉಲ್ಲೇಖ
Vijay Divorce: ತಮಿಳಿನ ಸೂಪರ್ ಸ್ಟಾರ್ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಟ ವಿಜಯ್ ಅವರು ಈಚೆಗೆ ರಾಜಕೀಯ ರಂಗ ಪ್ರವೇಶ ಮಾಡಿದ್ದರು. ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಸೃಷ್ಟಿಗೆ ಕಾರಣವಾಗಿದ್ದರು, ಈ ರೀತಿ ಇರುವಾಗಲೇ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಸೃಷ್ಟಿಯಾಗಿದೆ.
ತಮಿಳು ಸಿನಿಮಾದ ಸೂಪರ್‌ಸ್ಟಾರ್ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ಪತ್ನಿ ಸಂಗೀತಾ ನಟಿಯೊಬ್ಬರೊಂದಿಗಿನ ವಿವಾಹೇತರ ಸಂಬಂಧವನ್ನು ಉಲ್ಲೇಖಿಸಿ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮೂರು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನ, ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಸಿನಿಮಾ ಸೇರಿದಂತೆ ಹಲವು ದಾಖಲೆಗಳು ನಟ ವಿಜಯ್ ಅವರ ಹೆಸರಿನಲ್ಲಿದೆ.

ವಿಜಯ್ ಅವರು ಈಚೆಗೆ ತಮಿಳಗ ವೆಟ್ರಿ ಕಳಗಂ ಎನ್ನುವ ಪಕ್ಷವನ್ನು ಸ್ಥಾಪಿಸಿದ್ದರು. ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಚುನಾವಣೆಗೆ ವಿಜಯ್ ಅವರು ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಇರುವಾಗಲೇ ವಿಚ್ಛೇದನದ ಸುದ್ದಿ ಬಂದಿದೆ. ವಿಜಯ್ ಹಾಗೂ ಸಂಗೀತಾ ಅವರು ಅನ್ಯೂನ್ಯವಾಗಿ ಇದ್ದರು. ಇಬ್ಬರ ದಾಂಪತ್ಯ ಜೀವನದ ಬಗ್ಗೆ ನಟ ವಿಜಯ್ ಅವರು ಕೆಲವು ಇಂಟರ್‌ವ್ಯೂಗಳಲ್ಲಿ ಸಂತೋಷದಿಂದಲೇ ಹೇಳಿಕೊಂಡಿರುವುದು ಇದೆ. ಆದರೆ ಇದೀಗ ಸಂಗೀತಾ ಅವರು ನಟಿಯೊಬ್ಬರ ಹೆಸರು ಉಲ್ಲೇಖಿಸಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಎಎನ್‌ಐ ಪ್ರಕಾರ, ಟಿವಿಕೆ ಮುಖ್ಯಸ್ಥ ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಆ ಆಧಾರದ ಮೇಲೆ ವಿಚ್ಛೇದನವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ದಳಪತಿ ವಿಜಯ್ ವೈಯಕ್ತಿಕ ಜೀವನ
ವಿಜಯ್ ಅವರು ನಟ ಹಾಗೂ ರಾಜಕಾರಣಿಯಾಗಿ ತಮಿಳುನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರಿಗೆ ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಪಾರ ಅಭಿಮಾನ ಬಳಗವಿದೆ. 30 ವರ್ಷಗಳಿಗೂ ಹೆಚ್ಚು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಅವರು 69 ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಅವರು ಮುಂಚೂಣಿಯಲ್ಲಿದ್ದಾರೆ. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಅವರು ಸಿನಿಮಾ ತೊರೆದು ರಾಜಕೀಯಕ್ಕೆ
ಧುಮುಕಿದ್ದರು. ತಮಿಳಿನಲ್ಲಿ ಹಲವು ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿರುವ ವಿಜಯ್ ಅವರು ತಮಿಳುನಾಡಿನಲ್ಲಿ ದಳಪತಿ ಎಂಬ ಬಿರುದಿನಿಂದ ಫೇಮಸ್ ಆಗಿದ್ದಾರೆ.












Click it and Unblock the Notifications