Lok Sabha Election 2024: ಮತ್ತೊಂದು ಚುನಾವಣಾ ಸಮೀಕ್ಷೆ ಬಹಿರಂಗ, ಜನರ ಒಲವು ಯಾರತ್ತ..?
ಬೆಂಗಳೂರು, ಏಪ್ರಿಲ್ 04: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎನ್‌ಡಿಎ ಒಕ್ಕೂಟ ಅಧಿಕಾರ ಉಳಿಸಿಕೊಳ್ಳುವ ಹರಸಾಹಸದಲ್ಲಿದ್ದರೆ, ಇಂಡಿಯಾ ಒಕ್ಕೂಟ ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.
ಲೋಕಸಭಾ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಒಕ್ಕೂಟ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಸೋಲಿಸಲು ದೇಶದಾದ್ಯಂತ ಶಕ್ತಿ ಪ್ರದರ್ಶನ ನಡೆಸುತ್ತಿವೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶ ಗೆದ್ದವನು ದೇಶ ಗೆದ್ದ ಎನ್ನುವ ಮಾತಿನಂತೆ ಉತ್ತರ ಪ್ರದೇಶದ ಗೆಲುವಿನ ಸ್ಥಾನಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಿರ್ಣಾಯಕವಾಗಲಿದೆ. ಹೀಗಾಗಿ ಉತ್ತರ ಪ್ರದೇಶದ ಮೇಲೆ ದೇಶದ ನಾಯಕರ ಕಣ್ಣಿದೆ.
ಈ ರಾಜ್ಯವು ಲೋಕಸಭೆ ಚುನಾವಣೆಯಲ್ಲಿ 80 ಸ್ಥಾನಗಳೊಂದಿಗೆ ಗರಿಷ್ಠ ಪ್ರಾತಿನಿಧ್ಯವನ್ನು ಹೊಂದಿದೆ. ಹೀಗಾಗಿ ಇಲ್ಲಿ ಸ್ಥಾನಗಳಿಗಾಗಿ ಗುದ್ದಾಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಬಿಪಿ ನ್ಯೂಸ್ ಸೀವೋಟರ್ ಸಹಯೋಗದೊಂದಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಯಾರ ಮೇಲಿದೆ ಒಲವಿದೆ ಎನ್ನುವುದರ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.
ಸೀವೋಟರ್ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದ 42 ಶೇಕಡಾ ಜನರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸದ ಬಗ್ಗೆ ಹೆಚ್ಚು ತೃಪ್ತಿ ಹೊಂದಿದ್ದು, ಈ ಬಾರಿಯೂ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿ ಮತಚಲಾಯಿಸುವ ಸಾಧ್ಯತೆ ಹೆಚ್ಚಿದೆ.
ಇನ್ನು 29 ಶೇಕಡಾ ಜನರು ಕೇಂದ್ರ ಸರ್ಕಾರದ ಕೆಲಸಗಳ ಬಗ್ಗೆ ಅಲ್ಪ ಸಂತೃಪ್ತಿ ಹೊಂದಿದ್ದು, ಈ ಬಾರಿ ಈ ವರ್ಗದ ಮತಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇನ್ನು ಸಮೀಕ್ಷೆ ಪ್ರಕಾರ ಸುಮಾರು 27 ಪ್ರತಿಶತದಷ್ಟು ಜನರು ಸರ್ಕಾರದ ಕೆಲಸದ ಬಗ್ಗೆ ಅತೃಪ್ತರಾಗಿದ್ದು, ಈ ಬಾರಿ ಈ ವರ್ಗದ ಮತಗಳು ಇಂಡಿಯಾ ಒಕ್ಕೂಟಕ್ಕೆ ಬೀಳುವ ಸಾಧ್ಯತೆ ಇದೆ.

ಎಬಿಪಿ ನ್ಯೂಸ್ ಸೀವೋಟರ್ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಶೇಕಡಾ 52ರಷ್ಟು ಮತಗಳನ್ನು ಪಡೆಯಲಿದೆ. ಹಾಗೂ ಇಂಡಿಯಾ ಒಕ್ಕೂಟ 36 ರಷ್ಟು ಮತಗಳನ್ನು ಪಡೆಯಲಿದೆ. ಹಾಗೂ ಬಹುಜನ ಸಮಾಜ ಪಕ್ಷ ಸೇರಿದಂತೆ ಇತರ ಪಕ್ಷಗಳು ಕೇವಲ 7 ಪ್ರತಿಶತ ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಸಮೀಕ್ಷೆಯ ಪ್ರಕಾರ ಶೇ.62ರಷ್ಟು ಜನರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ನೋಡಲು ಬಯಸಿದ್ದರೆ, ಇನ್ನು ಶೇ.24ರಷ್ಟು ಜನರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ.
ಇನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಸುಮಾರು 51 ಪ್ರತಿಶತದಷ್ಟು ಜನರು ಸಿಎಂ ಯೋಗಿ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಹಾಗೂ ಕೇವಲ 25 ಪ್ರತಿಶತದಷ್ಟು ಜನರು ರಾಜ್ಯ ಸರ್ಕಾರದ ಕೆಲಸದ ಮೇಲೆ ಅಲ್ಪ ಸಂತೃಪ್ತಿ ಹೊಂದಿದ್ದು, ಇನ್ನೂ ಶೇ.23ರಷ್ಟು ಜನರು ಬಿಜೆಪಿ ಸರ್ಕಾರದ ಕೆಲಸವನ್ನು ದೂಷಿಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.












Click it and Unblock the Notifications