ಎಬಿಪಿ ನ್ಯೂಸ್ ಸಮೀಕ್ಷೆ : ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೊಡೆತ
ನವದೆಹಲಿ, ಮೇ 24 : ಪ್ರಧಾನಿ ನರೇಂದ್ರ ಮೋದಿ ಮುಖಂಡತ್ವದ ಎನ್‌ಡಿಎ ಸರಕಾರ 4 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ಮೂಡ್ ಎತ್ತ ಸಾಗಿದೆ, ಯಾವ ಪಕ್ಷದ ಅಲೆ ಜೋರಾಗಿದೆ ಎಂಬುದನ್ನು ತಿಳಿಯಲು ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಸಂಸ್ಥೆಯ ಜಂಟಿಯಾಗಿ ಸಮೀಕ್ಷೆ ನಡೆಸುತ್ತಿದೆ.
ಸದ್ಯಕ್ಕೆ ಬಿಜಪಿ ಸರಕಾರವಿರುವ ಮಹಾರಾಷ್ಟ್ರದಲ್ಲಿ, ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ಮೈತ್ರಿಕೂಟ ಈಗಲೂ ಮುನ್ನಗ್ಗಲಿದೆ. ಆದರೆ, ತನ್ನ ಮತಸಂಖ್ಯೆಯನ್ನು ಗಣನೀಯವಾಗಿ ಏರಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಭಾರೀ ಟಕ್ಕರ್ ನೀಡಲಿದೆ.
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎನ್‌ಡಿಎ ಮಹಾರಾಷ್ಟ್ರದಲ್ಲಿ ಶೇ.51ರಷ್ಟು ಮತ ಗಳಿಸಿದ್ದರೆ, ಇದೀಗ ಅದರ ಮತಗಳಿಕೆ ಶೇಕಡಾ 3ರಷ್ಟು ಕಡಿಮೆಯಾಗಲಿದೆ. ಆದರೆ, ಕಳೆದ ಬಾರಿ ಶೇ.35ರಷ್ಟು ಮಾತ್ರ ಮತ ಪಡೆದಿದ್ದ ಯುಪಿಎ ಈಬಾರಿ ಶೇ.40ರಷ್ಟು ಮತ ಪಡೆದು ಬಿಜೆಪಿ ಮತ್ತು ಶಿವಸೇನೆಗೆ ಬೆವರಿಳಿಸಲಿದೆ.

ಇದು ಒಂದು ರೀತಿ ಎನ್‌ಡಿಎಗೆ ಭಾರೀ ಹೊಡೆತ. ಒಂದು ವೇಳೆ ಶಿವಸೇನೆಯೊಡನೆ ಸೇರಿ ಬಿಜೆಪಿ ಹೋರಾಟ ನಡೆಸಿದರೆ ಬಿಜೆಪಿಗೆ ಹೆಚ್ಚು ಲಾಭದಾಯಕವಾಗಲಿದೆ. ಆದರೆ, ಬಿಜೆಪಿಯೊಡನೆ ಸೇರಿ ಶಿವಸೇನೆ ಚುನಾವಣೆಯಲ್ಲಿ ಧುಮುಕಿದರೆ ಶಿವಸೇನೆಗೆ ಶೇ.5ರಷ್ಟು ಮತಗಳಿಕೆ ಕಡಿಮೆಯಾಗಲಿದೆ ಎನ್ನುತ್ತದೆ ಸಮೀಕ್ಷೆ.
ಹಾಗೆ ನೋಡಿದರೆ, ಬಿಜೆಪಿ ಮತ್ತು ಶಿವಸೇನೆ ಒಗ್ಗೂಡಿ, ತಮ್ಮ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿ ಹೋರಾಟ ನಡೆಸದಿದ್ದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ತಮ್ಮನ್ನು ಬಳಸಿಕೊಂಡು ಬಿಸಾಕುವುದೇ ಬಿಜೆಪಿಯ ನೀತಿ ಎಂದು ಶಿವಸೇನೆಯ ನಾಯಕರು ಬಿಜೆಪಿಯನ್ನು ದೂರುತ್ತಾರೆ.












Click it and Unblock the Notifications