AAP VS BJP: ದೆಹಲಿ ಪಾಲಿಕೆ ಚುನಾವಣೆ ಫಲಿತಾಂಶದ ಪ್ರಮುಖ ಅಂಶಗಳು
ನವದೆಹಲಿ, ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆ(MCD) ಚುನಾವಣೆಯಲ್ಲಿ ಎಎಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಹಾಗೂ ಭಾರತೀಯ ಜನತಾ ಪಕ್ಷ (BJP) ನೇರ ಹಣಾಹಣಿಯಲ್ಲಿ ತೊಡಗಿದ್ದವು. ಪ್ರತಿಷ್ಠೆಯ ಕಣದಲ್ಲಿ ಎಎಪಿಗೆ ಅಭೂತಪೂರ್ವ ಜನ ಸಿಕ್ಕಿರುವುದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.
Delhi MCD Election ಫಲಿತಾಂಶದ ಪ್ರಮುಖ ಅಂಶಗಳು ಇಲ್ಲಿವೆ...
1- ದೆಹಲಿ ಮಹಾನಗರ ಪಾಲಿಕೆಯನ್ನು (MCD) ಮೊದಲು ಮೂರು ವಲಯಗಳಾಗಿ ವಿಂಗಡಿಸಲಾಗಿತ್ತು. ಉತ್ತರ, ಪೂರ್ವ ಹಾಗೂ ದಕ್ಷಿಣವೆಂದು ಕರೆಯಲಾಗುತ್ತಿತ್ತು. ಈ ಚುನಾವಣೆಯಲ್ಲಿ ಮೂರು ವಲಯಗಳನ್ನು ಒಂದುಗೂಡಿಸಲಾಯಿತು. ಇದು ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
2- ದೆಹಲಿ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು, ಆಡಳಿತಾರೂಢ ಬಿಜೆಪಿಯನ್ನು ಮೊದಲ ಬಾರಿಗೆ ನೇರ ಪೈಪೋಟಿಯಲ್ಲಿ ಸೋಲಿಸಿದೆ.

3- ದೆಹಲಿಯಲ್ಲಿ ಎಎಪಿ ಪಕ್ಷವು ಸ್ಥಾಪನೆಯಾಗಿ ಹತ್ತು ವರ್ಷಗಳು ಕಳೆದಿವೆ. 2012ರ ಅಕ್ಟೋಬರ್‌ನಲ್ಲಿ ಎಎಪಿ ಸ್ಥಾಪನೆಯಾಗಿತ್ತು. ಇಲ್ಲಿಂದ ಎಎಪಿ ಏಳು ಚುನಾವಣೆಗಳನ್ನು ಎದುರಿಸಿದೆ. ದೆಹಲಿ ವಿಧಾನಸಭಾ ಚುನಾವಣೆ 2013, ರಾಷ್ಟ್ರೀಯ ಚುನಾವಣೆ 2014, ದೆಹಲಿ ವಿಧಾನಸಭಾ ಚುನಾವಣೆ 2015, MCD ಚುನಾವಣೆ 2017, ಸಂಸತ್ ಚುನಾವಣೆ 2019, ದೆಹಲಿ ವಿಧಾನಸಭಾ ಚುನಾವಣೆ 2020 ಮತ್ತು ಈ ವರ್ಷದ MCD ಚುನಾವಣೆ. ಈ ಎಲ್ಲ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಗೆದ್ದು, ಮೂರರಲ್ಲಿ ಎಎಪಿ ಸೋತಿದೆ.
4- ಈ ಬಾರಿಯ ಎಂಸಿಡಿ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯ ವ್ಯತ್ಯಾಸ ಕೇವಲ ಶೇ.3 ರಷ್ಟಿದೆ.
5- 2017 ರ MCD ಚುನಾವಣೆಗೆ ಹೋಲಿಸಿದರೆ, AAP ಸರಿಸುಮಾರು 16 ಶೇಕಡಾ ಮತಗಳನ್ನು ಪಾಲನ್ನು ಹಚ್ಚಿಸಿಕೊಂಡಿದೆ.
6- ಎಂಸಿಡಿಯಲ್ಲಿನ ಭ್ರಷ್ಟಾಚಾರ ಚುನಾವಣೆಯ ಮುಖ್ಯ ವಿಷಯವಾಗಿತ್ತು. ಎಎಪಿ ಇದನ್ನು ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿತ್ತು. ದೆಹಲಿ ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ವಿರುದ್ಧ ಹಣ ವರ್ಗಾವಣೆ ಆರೋಪಗಳನ್ನು ಬಿಜೆಪಿ ಮಾಡಿತ್ತು.

7- ಸತ್ಯೇಂದ್ರ ಜೈನ್ ಅವರ ವಿಧಾನಸಭಾ ಕ್ಷೇತ್ರವಾದ ಶಕುರ್ ಬಸ್ತಿಯಲ್ಲಿನ ಎಲ್ಲಾ ಮೂರು ಪುರಸಭೆಯ ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಸರಸ್ವತಿ ವಿಹಾರ್, ಪಶ್ಚಿಮ ವಿಹಾರ್ ಮತ್ತು ರಾಣಿ ಬಾಗ್ ಈ ಪುರಸಭೆಯ ಮೂರು ವಾರ್ಡ್‌ಗಳಾಗಿವೆ.
8- ಸಿಸೋಡಿಯಾ ಅವರ ವಿಧಾನಸಭಾ ಕ್ಷೇತ್ರವಾದ ಪಟ್ಪರ್‌ಗಂಜ್‌ನ ನಾಲ್ಕು ಎಂಸಿಡಿ ವಾರ್ಡ್‌ಗಳ ಪೈಕಿ ಮೂರರಲ್ಲಿ ಬಿಜೆಪಿ ಗೆದ್ದಿದೆ. ವಿನೋದ್ ನಗರ, ಮಾಂಡವ್ಲಿ ಮತ್ತು ಮಯೂರ್ ವಿಹಾರ್- 2 ರಲ್ಲಿ ಬಿಜೆಪಿ ಜಯಗಳಿಸಿದೆ.
9- ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ನ ಮತ ಹಂಚಿಕೆ ಪ್ರಮಾಣವು ಸರಿಸುಮಾರು ಶೇಕಡಾ 11 ರಷ್ಟು ಕುಸಿದಿದೆ. ಈ ಬಾರಿ ಒಂಬತ್ತು ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದುಕೊಂಡಿದೆ.
10- ಎಎಪಿ ಮತ್ತು ಕಾಂಗ್ರೆಸ್ ನಡುವೆ ಮುಸ್ಲಿಂ ಮತಗಳು ವಿಭಜನೆಯಾಗಿರುವಂತೆ ತೋರುತ್ತಿದೆ. ಇದು ಬಿಜೆಪಿಗೆ ಹಲವು ವಾರ್ಡ್‌ಗಳಲ್ಲಿ ಸಹಾಯ ಮಾಡಿದೆ.












Click it and Unblock the Notifications