ಹೊಸ ದಾಖಲೆ ಬರೆದ ದೆಹಲಿ ಮಾಜಿ ಮುಖ್ಯಮಂತ್ರಿ ಅತಿಶಿ
ನವದೆಹಲಿ, ಫೆಬ್ರವರಿ 24: ದೆಹಲಿ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಘೋಷಣೆಯಾಗಿದೆ. ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ರಾಷ್ಟ್ರ ರಾಜಧಾನಿಯ ಅಧಿಕಾರ ಸಿಕ್ಕಿದೆ. ಬಿಜೆಪಿ ನಾಯಕಿ ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿ. ಈಗ ರಾಜ್ಯದ ವಿರೋಧ ಪಕ್ಷದ ಸ್ಥಾನವು ಮಹಿಳೆಯ ಪಾಲಾಗಿದೆ.
70 ಸದಸ್ಯ ಬದಲ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48, ಎಎಪಿ 22 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಯಾವುದೇ ಸ್ಥಾನಗಳಿಸಿಲ್ಲ. ಈಗ ಎಎಪಿ ರಾಜ್ಯದ ಪ್ರತಿಪಕ್ಷವಾಗಿದೆ. ಆದರೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಸೋಲು ಕಂಡಿರುವ ಕಾರಣ ಪಕ್ಷ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು.

ಆಮ್ ಆದ್ಮಿ ಪಕ್ಷದ ಶಾಸಕರು ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ದೆಹಲಿಯ 3ನೇ ಮಹಿಳಾ ಮುಖ್ಯಂತ್ರಿಯಾಗಿ ದಾಖಲೆ ಬರೆದಿದ್ದ ಅತಿಶಿ ಈಗ ದೆಹಲಿಯ ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿಯಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಚುನಾವಣೆಯಲ್ಲಿ ಗೆಲುವು: ದೆಹಲಿ ಮುಖ್ಯಮಂತ್ರಿಯಾಗಿದ್ದ ಎಎಪಿ ನಾಯಕಿ ಅತಿಶಿ ಫೆಬ್ರವರಿ 5ರಂದು ನಡೆದ ಚುನಾವಣೆಗೆ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅವರು 52,154 ಮತಗಳನ್ನು ಪಡೆದು 3,521 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಅತಿಶಿ ಎದುರಾಳಿಯಾಗಿದ್ದ ಬಿಜೆಪಿಯ ರಮೇಶ್ ಬಿಧೂರಿ 48,633 ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಾಂಬಾ 4,392 ಮತಗಳನ್ನು ಪಡೆದಿದ್ದಾರೆ. ಈಗ ಎಎಪಿ ನಾಯಕಿ ಅತಿಶಿ ದೆಹಲಿ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದರು. ಆದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರೆದರು. ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿದ ಬಳಿಕ ಮುಖ್ಯಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು.
2024ರ ಸೆಪ್ಟೆಂಬರ್‌ನಲ್ಲಿ ಎಎಪಿ ಅತಿಶಿ ಮರ್ಲೆನಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿತು. ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್ ಬಳಿಕ ಅತಿಶಿ ಮರ್ಲೆನಾ ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾದರು. ಈಗ ಅವರು ದೆಹಲಿಯ ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿಯಾಗಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸೋತಿದ್ದು ಮಾತ್ರವಲ್ಲ ಅರವಿಂದ್ ಕೇಜ್ರಿವಾಲ್, ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ನಾಯಕರು ಸೋಲು ಕಂಡಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋತಿದ್ದಾರೆ. ಆದ್ದರಿಂದ ಎಎಪಿ ಮಾಜಿ ಸಿಎಂ ಅತಿಶಿಯನ್ನು ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದೆ.
ಮಾಜಿ ಸಿಎಂ ಅತಿಶಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದಾಗ ಹಲವು ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಪಕ್ಷದ ಬಗ್ಗೆಯೂ ಅವರಿಗೆ ಅಪಾರವಾದ ಜ್ಞಾನವಿದೆ. ಆದ್ದರಿಂದ ಅವರು ವಿರೋಧ ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ನಿರೀಕ್ಷೆ ಇದೆ.












Click it and Unblock the Notifications