'ಶೆಲ್ಲಿ ಒಬೆರಾಯ್' ಈಗ ದೆಹಲಿ ಮೇಯರ್: ಗೂಂಡಾಗಳು ಸೋತರು ಎಂದ ಎಎಪಿ- ಕೊನೆಯಾದ ಸಂಘರ್ಷದ ವರದಿ, ವಿವರ
ಬುಧವಾರ ನಡೆದ ದೆಹಲಿ ಮೇಯರ್ ಚುನಾವಣೆಯಲ್ಲಿ ಎಎಪಿಯ 'ಶೆಲ್ಲಿ ಒಬೆರಾಯ್' ಜಯಗಳಿಸಿದ್ದಾರೆ. ಒಬೆರಾಯ್ ಅವರು ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರ ವಿರುದ್ಧ 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನವದೆಹಲಿ, ಫೆಬ್ರವರಿ 22: ಬುಧವಾರ ನಡೆದ ದೆಹಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) 'ಶೆಲ್ಲಿ ಒಬೆರಾಯ್' ಜಯಗಳಿಸಿದ್ದಾರೆ. ಒಬೆರಾಯ್ ಅವರು ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರ ವಿರುದ್ಧ 34 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ- ಎಎಪಿ ನಡುವಿನ ಸುದೀರ್ಘ ಸಂಘರ್ಷವೊಂದು ಕೊನೆಗೊಂಡಂತಾಗಿದೆ.
ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿಯ ರೇಖಾ ಗುಪ್ತಾ ಅವರು 116 ಮತಗಳನ್ನು ಪಡೆದರು. ಎಎಪಿ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು 150 ಮತಗಳನ್ನು ಪಡೆದರು.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮೇಯರ್ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಶೆಲ್ಲಿ ಒಬೆರಾಯ್ ಅವರನ್ನು ಅಭಿನಂದಿಸಿದರು. 'ಗೂಂಡಾಗಳು ಸೋತರು, ಸಾರ್ವಜನಿಕರು ಗೆದ್ದರು' ಎಂದು ಮನೀಶ್ ಸಿಸೋಡಿಯಾ ಹೇಳಿದರು.
ಈ ವಿಚಾರವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅನೇಕ ಅಭಿನಂದನೆಗಳು. ದೆಹಲಿಯ ಜನರಿಗೆ ಮತ್ತೊಮ್ಮೆ ಹೃದಯಪೂರ್ವಕ ಕೃತಜ್ಞತೆಗಳು. ಎಎಪಿಯ ಮೊದಲ ಮೇಯರ್ ಶೆಲ್ಲಿ ಒಬೆರಾಯ್ ಅವರಿಗೆ ಅನೇಕ ಅಭಿನಂದನೆಗಳು' ಎಂದು ಸಿಸೋಡಿಯಾ ತಿಳಿಸಿದರು.
'ಗೂಂಡಾಗಳು ಸೋತರು, ಸಾರ್ವಜನಿಕರು ಗೆದ್ದರು' ಎಂಬ ಸಾಲನ್ನು ಪುನರಾವರ್ತಿಸುತ್ತಾ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮೇಯರ್ ಚುನಾವಣೆಯಲ್ಲಿ ಒಬೆರಾಯ್ ಅವರ ವಿಜಯಕ್ಕಾಗಿ ದೆಹಲಿಯ ಜನರನ್ನು ಅಭಿನಂದಿಸಿದರು.

'ಇಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ದೆಹಲಿಯ ಜನರು ಗೆದ್ದಿದ್ದಾರೆ ಮತ್ತು ಗೂಂಡಾಗಿರಿಯನ್ನು ಸೋಲಿಸಿದ್ದಾರೆ. ಶೆಲ್ಲಿ ಒಬೆರಾಯ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ದೆಹಲಿಯ ಜನರಿಗೆ ಅಭಿನಂದನೆಗಳು' ಎಂದು ಅರವಿಂದ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಶುಕ್ರವಾರದ ತೀರ್ಪಿನ ಪ್ರಕಾರ ಉಪಮೇಯರ್ ಮತ್ತು ಪ್ರಬಲ ಸ್ಥಾಯಿ ಸಮಿತಿಯ ಆರು ಸದಸ್ಯರು ಸೇರಿದಂತೆ ಉಳಿದ ಚುನಾವಣೆಗಳಿಗೆ ಒಬೆರಾಯ್ ಈಗ ಅಧ್ಯಕ್ಷತೆ ವಹಿಸಲಿದ್ದಾರೆ.
ಮೇಯರ್ ಆಯ್ಕೆಯೊಂದಿಗೆ ವಿಶೇಷಾಧಿಕಾರಿಗಳ ಕಚೇರಿಯೂ ಮುಕ್ತಾಯವಾಗಿದೆ. ವಿಶೇಷ ಅಧಿಕಾರಿ ಅಶ್ವಿನಿ ಕುಮಾರ್ ಅವರು ಮೇ 22, 2022 ಮತ್ತು ಫೆಬ್ರವರಿ 22, 2023 ರ ನಡುವೆ ವಿಚಾರಣಾ ವಿಭಾಗದ ಅಧಿಕಾರವನ್ನು ಹೊಂದಿದ್ದರು.

ಒಬೆರಾಯ್ ಅವರು ಸಾಂವಿಧಾನಿಕ ರೀತಿಯಲ್ಲಿ ಸದನವನ್ನು ನಡೆಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು ಮತ್ತು ಅವರಿಂದ ಸಹಕಾರಕ್ಕಾಗಿ ಕರೆ ನೀಡಿದರು.
'ನಾನು ಈ ಸದನವನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ಸದನದ ಘನತೆಯನ್ನು ಕಾಪಾಡುತ್ತೀರಿ ಮತ್ತು ಅದರ ಸುಗಮ ಕಾರ್ಯನಿರ್ವಹಣೆಗೆ ಸಹಕರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ ನಂತರ ಹೇಳಿದರು.
ಈ ಹಿಂದೆ ಚುನಾವಣೆ ನಡೆಸಲು ಮೂರು ಬಾರಿ ವಿಫಲ ಯತ್ನಗಳು ನಡೆದಿವೆ. ಈ ಯತ್ನಗಳು ವಿಫಲವಾದ ನಂತರ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಅದರ ಬಳಿಕ ಮೇಯರ್ ಚುನಾವಣೆ ನಡೆಸಲಾಯಿತು.
ಕಳೆದ ವರ್ಷ ಡಿಸೆಂಬರ್ 4 ರಂದು ನಡೆದ ಎಂಸಿಡಿ ಚುನಾವಣೆಯಲ್ಲಿ ಎಎಪಿ ಸ್ಪಷ್ಟ ವಿಜಯಿಯಾಗಿ ಹೊರಹೊಮ್ಮಿತ್ತು. 134 ವಾರ್ಡ್‌ಗಳನ್ನು ಗೆದ್ದು, ಎಂಸಿಡಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. 250 ಸದಸ್ಯ ಬಲದ ಮುನ್ಸಿಪಲ್ ಹೌಸ್‌ನಲ್ಲಿ ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿದರೆ, ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು.
ಮೇಯರ್, ಉಪಮೇಯರ್ ಮತ್ತು ಆರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ನಂತರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿದೆ. ಸ್ಥಾಯಿ ಸಮಿತಿಗೆ ನಡೆಯುವ ಚುನಾವಣೆಯಲ್ಲಿ ಎಎಪಿ ಮೂರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆರನೇ ಸ್ಥಾನಕ್ಕಾಗಿ ಈ ಎರಡೂ ಪಕ್ಷಗಳು ಹೋರಾಟ ನಡೆಸುತ್ತಿವೆ.












Click it and Unblock the Notifications