Haryana Election 2024: ಹರ್ಯಾಣದಲ್ಲಿ ಮುರಿದು ಬಿದ್ದ ಎಎಪಿ, ಕಾಂಗ್ರೆಸ್ ಮೈತ್ರಿ?
ನವದೆಹಲಿ, ಸೆಪ್ಟೆಂಬರ್ 10: ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಕಾಂಗ್ರೆಸ್ ಮತ್ತು ಎಎಪಿ ನಡುವಿನ ಮೈತ್ರಿ ಮಾತುಕತೆ ಮುರಿದು ಬಿದ್ದಿದೆ. 90 ಕ್ಷೇತ್ರ ಹೊಂದಿರುವ ಹರ್ಯಾಣ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ 32 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಎಪಿ ಪಕ್ಷ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ ಕೆಲವು ಕ್ಷೇತ್ರಕ್ಕೆ ಎಎಪಿಯೂ ಅಭ್ಯರ್ಥಿ ಘೋಷಣೆ ಮಾಡಿದ್ದು, ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿಲ್ಲ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ 2024 ಲೋಕಸಭೆ ಚುನಾವಣೆಗೆ ರಚನೆಯಾದ 'ಇಂಡಿಯಾ' ಮೈತ್ರಿಕೂಟದ ಮಿತ್ರ ಪಕ್ಷಗಳು. ಹರ್ಯಾಣದಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದರು.

ಭಾನುವಾರ ಹರ್ಯಾಣ ರಾಜ್ಯದ ಸೀಟು ಹಂಚಿಕೆ ಕುರಿತು ಎಎಪಿ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಮತ್ತು ಹರ್ಯಾಣ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಾಬಬರಿಯಾ ಸಭೆ ನಡೆಸಿದರು. ಸೋಮವಾರ ಸೀಟು ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸೋಮವಾರ ಎಎಪಿ ಪಕ್ಷ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಎಪಿ 10 ಕ್ಷೇತ್ರಗಳನ್ನು ಕೇಳಿತ್ತು ಎಂಬ ಮಾಹಿತಿ ಇದೆ. ಆದರೆ ಕಾಂಗ್ರೆಸ್ ಪಕ್ಷ 5 ಕ್ಷೇತ್ರಗಳನ್ನು ಎಎಪಿಗೆ ಬಿಟ್ಟುಕೊಡಲು ಮುಂದಾಗಿತ್ತು. ಸೀಟು ಹಂಚಿಕೆಯ ಸೂತ್ರ ಬಗೆಹರಿಯದ ಕಾರಣ ಸೋಮವಾರ ಕಾಂಗ್ರೆಸ್-ಎಎಪಿ ಮೈತ್ರಿಯ ಸ್ಪಷ್ಟ ಚಿತ್ರಣ ಘೋಷಣೆಯಾಗಲೇ ಇಲ್ಲ. ಆದರೆ ಎಎಪಿಯ 12 ಅಭ್ಯರ್ಥಿಗಳು ಘೋಷಣೆಯಾದರು.
90 ಕ್ಷೇತ್ರಗಳಲ್ಲೂ ಸ್ಪರ್ಧೆ: ಹರ್ಯಾಣ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಆಡಳಿತ ಪಕ್ಷ ಬಿಜೆಪಿ. ಚುನಾವಣೆಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಎದುರಾಳಿಗಳು. ಬಿಜೆಪಿ ಈಗಾಗಲೇ 67 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಸೆಪ್ಟೆಂಬರ್ 12 ಕೊನೆಯ ದಿನ.
ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೊಂಡು ಚುನಾವಣೆ ಎದುರಿಸಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಸೀಟು ಹಂಚಿಕೆ ಲೆಕ್ಕಾಚಾರ ಅಂತಿಮವಾಗದ ಕಾರಣ ಮೈತ್ರಿ ಘೋಷಣೆಯಾಗಿಲ್ಲ. ಎಎಪಿ ನಾಯಕರೊಬ್ಬರು 90 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಸೋಮವಾರ ಬಿಜೆಪಿ 20 ಕ್ಷೇತ್ರಕ್ಕೆ, ಎಎಪಿ 12 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆಯಾದ ಕ್ಷೇತ್ರಕ್ಕೆ ಎಎಪಿ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಎರಡೂ ಪಕ್ಷಗಳ ನಡುವೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂಬುದನ್ನು ಖಚಿತಪಡಿಸಿದೆ.
"ಎಎಪಿ ಇನ್ನೊಂದು ಪಟ್ಟಿಯಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. 90 ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಬೆಂಬಲ ಸಿಗಲಿದೆ ಎಂಬ ವಿಶ್ವಾಸವಿದೆ" ಎಂದು ಎಎಪಿ ನಾಯಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿ ಹರ್ಯಾಣದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆ ಮಾಡಿಕೊಂಡಿದ್ದವು.ಇದು ರಾಜ್ಯದ 10 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸದಂತೆ ತಡೆದಿತ್ತು. ಈ ಹಿನ್ನಲೆಯಲ್ಲಿಯೇ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಸೀಟು ಹಂಚಿಕೆ ಲೆಕ್ಕಾಚಾರ ಕಗ್ಗಂಟಾಗಿಯೇ ಉಳಿದಿದೆ.












Click it and Unblock the Notifications