ಆಧಾರ್‌ನಿಂದ ಸರಕಾರಕ್ಕೆ 2 ಲಕ್ಷಕೋಟಿ ಉಳಿತಾಯ: ನೀತಿ ಆಯೋಗ
ನವದೆಹಲಿ, ಜೂನ್ 2: ಸರಕಾರದ ಜನಕಲ್ಯಾಣ ಯೋಜನೆಗಳಿಗೆ ಆಧಾರ್ 'ಆಧಾರಸ್ತಂಭ' ಆಗಿದೆ. ನಕಲಿ ಫಲಾನುಭವಿಗಳನ್ನು ಗುರುತಿಸಿ ನಿರ್ಮೂಲನೆ ಮಾಡಲು ಸಹಕಾರಿಯಾಗಿರುವ ಆಧಾರ್‌ನಿಂದ ಕೇಂದ್ರ ಸರಕಾರಕ್ಕೆ 2 ಲಕ್ಷಕೋಟಿ ರೂಗಿಂತ ಹೆಚ್ಚು ಹಣದ ಉಳಿತಾಯ ಆಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಬುಧವಾರ ಇಲ್ಲಿ ಆಧಾರ್ ಬಳಕೆಯ ಕುರಿತ ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ನೀತಿ ಆಯೋಗ್ ಸಿಇಒ, "ಸರಕಾರದ ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಮತ್ತು ಬಹಳ ತ್ವರಿತವಾಗಿ ಹಣ ವರ್ಗಾವಣೆ ಆಗಲು ಆಧಾರ್ ನೆರವಾಗಿದೆ. ಇದರಿಂದ ಬಹಳ ದೊಡ್ಡ ಮೊತ್ತದ ಹಣದ ಉಳಿತಾಯ ಅಗಲು ಸಾಧ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು.
ವಿಶ್ವಕ್ಕೆ ಮಾದರಿ ಆಧಾರ್:
ವಿಶ್ವದ ಬಯೋಮೆಟ್ರಿಕ್ ಆಧಾರಿತ ಗುರುತು ಯೋಜನೆಗಳಲ್ಲಿ ಆಧಾರ್ ಕೂಡ ಒಂದು. ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮೊದಲಾದ ಅಂತರರಾಷ್ಟ್ರೀಯ ಸಂಸ್ಥೆಗಳು ಬೇರೆ ದೇಶಗಳಲ್ಲಿ ಆಧಾರ್ ಮಾದರಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂದು ಚರ್ಚೆಗಳನ್ನು ಹುಟ್ಟುಹಾಕಿವೆ ಎಂದು ಅಮಿತಾಭ್ ಕಾಂತ್ ಬಣ್ಣಿಸಿದರು.

"315 ಕೇಂದ್ರ ಯೋಜನೆಗಳು ಮತ್ತು 500 ರಾಜ್ಯ ಸರಕಾರಗಳ ಯೋಜನೆಗಳು ಆಧಾರ್ ಮೂಲಕ ಪರಿಣಾಮಕಾರಿ ಜನರನ್ನು ತಲುಪುತ್ತಿವೆ. ಸರಕಾರದ ಜನಕಲ್ಯಾಣ ಯೋಜನೆಗಳಿಗೆ ಆಧಾರ್ ಈಗ ಆಧಾರಸ್ತಂಭವಾಗಿದೆ. ಮಧ್ಯವರ್ತಿ ಅಥವಾ ತಡೆ ಇಲ್ಲದೆ ಬಹಳ ಕ್ಷಿಪ್ರವಾಗಿ ಫಲಾನುಭವಿಗಳಿಗೆ ಹಣ ತಲುಪುತ್ತಿದೆ. ನಕಲಿ ಗುರುತುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಇದರಿಂದ ಸರಕಾರಕ್ಕೆ 2.22 ಲಕ್ಷಕೋಟಿ ರೂ ಉಳಿತಾಯವಾಗಿದೆ" ಎಂದು ನೀತಿ ಆಯೋಗ್ ಸಿಇಒ ಮಾಹಿತಿ ನೀಡಿದರು.
2009ರಲ್ಲಿ ಆರಂಭಗೊಂಡ ಆಧಾರ್ ಯೋಜನೆಯಲ್ಲಿ ಭಾರತದ ನಿವಾಸಿಗಳಿಗೆ 12 ಅಂಕಿಯ ಆಧಾರ್ ನಂಬರ್ ಇರುವ ಕಾರ್ಡ್ ಕೊಡಲಾಗುತ್ತದೆ. ಇದು ಬೆರಳಚ್ಚು, ಕಣ್ಣಿನ ಪೊರೆ ಇತ್ಯಾದಿ ಬಯೋಮೆಟ್ರಿಕ್ ಆಧಾರವಾಗಿಟ್ಟುಕೊಂಡು ಪ್ರತಿಯೊಬ್ಬರಿಗೂ ಆಧಾರ್ ನೀಡಲಾಗುತ್ತದೆ. ಬಯೋಮೆಟ್ರಿಕ್ ಜೊತೆಗೆ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಆಧಾರ್ ಒಳಗೊಂಡಿರುತ್ತದೆ. ಬಯೋಮೆಟ್ರಕ್ ಆಧಾರಿತವಾದ್ದರಿಂದ ಒಬ್ಬ ವ್ಯಕ್ತಿ ಎರಡೆರಡು ಕಾರ್ಡ್ ಪಡೆಯಲು ಅಸಾಧ್ಯವಾಗುತ್ತದೆ. ಈ ಅಂಶವೇ ಆಧಾರ್ ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಇತ್ತೀಚಿನ ಕೆಲ ವರ್ಷಗಳಿಂದ ಆಧಾರ್ ಕಾರ್ಡ್‌ನ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳುವ ಅವಕಾಶ ಕೊಡಲಾಗಿದೆ. ಆಧಾರ್ ತಿದ್ದುಪಡಿ ಇತ್ಯಾದಿ ಕಾರ್ಯ ಈಗ ಸುಗಮಗೊಂಡಿದೆ.
ಸರಕಾರದ ಯೋಜನೆಗಳಿಗೆ ಆಧಾರ್ ಅತ್ಯಂತ ಮಹತ್ವದ್ದಾಗಿದೆ. ಹಿಂದೆ ಹೇರಳವಾಗಿದ್ದ ನಕಲಿ ಗುರುತುಗಳು, ನಕಲಿ ವ್ಯಕ್ತಿಗಳಿಗೆ ಬಹಳ ದೊಡ್ಡ ಪ್ರಮಾಣದ ಹಣ ಹೋಗುತ್ತಿತ್ತು. ಈಗ ಆಧಾರ್‌ನಿಂದ ಈ ನಕಲಿ ಗುರುತುಗಳು ನಿರ್ಮೂಲನೆಗೊಂಡಿದೆ. ಇದರಿಂದ ನೈಜ ಫಲಾನುಭವಿಗಳಿಗೆ ಸರಕಾರಿ ಯೋಜನೆಗಳ ಲಾಭ ಯಾವ ಮಧ್ಯವರ್ತಿಯ ಅಗತ್ಯವೇ ಇಲ್ಲದಂತೆ ನೇರವಾಗಿ ತಲುಪುತ್ತದೆ.
ಆಧಾರ್ ಜೊತೆ ಜನ್ ಧನ್ ಬ್ಯಾಂಕ್ ಖಾತೆ, ಎಲ್‌ಪಿಜಿ ಖಾತೆ ಇತ್ಯಾದಿಯನ್ನು ಜೋಡಿಸಿರುವುದು ಸರಕಾರಿ ಯೋಜನೆಗಳ ಲಾಭದ ತ್ವರಿತ ವಿಲೇವಾರಿಗೆ ಅನುಕೂಲವಾಗಿರುವುದು ಹೌದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications