ಪತ್ರದೊಂದಿಗೆ ಜೀವಂತ ಬುಲೆಟ್! ಬಿಜೆಪಿ ಶಾಸಕನಿಗೆ ವಿಚಿತ್ರ ಬೆದರಿಕೆ
ಗುವಾಹಟಿ, ಜೂನ್ 13: ಪತ್ರದೊಂದಿಗೆ ಎರಡು ಜೀವಂತ ಬುಲೆಟ್ ವೊಂದನ್ನು ಇಟ್ಟು, ಬಿಜೆಪಿ ಶಾಕನೊಬ್ಬನಿಗೆ ವಿಚಿತ್ರ ಬೆದರಿಕೆಯೊಂದು ಬಂದ ಘಟನೆ ಅಸ್ಸಾಮಿನ ಗುವಾಹಟಿಯಲ್ಲಿ ನಡೆದಿದೆ.
ಅಸ್ಸಾಮಿನ ಬಿಜೆಪಿಯ ಏಕೈಕ ಮುಸ್ಲಿಂ ಶಾಸಕ ಅಮಿನುಲ್ ಹಾಖ್ ಲಷ್ಕರ್ ಎಂಬುವವರಿಗೆ ಪತ್ರವೊಂದು ಬಂದಿದ್ದು, 'ಇನ್ನು 15 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ನಿಮ್ಮನ್ನು ಸಾಯಿಸುತ್ತೇವೆ' ಎಂದು ಪತ್ರದಲ್ಲಿ ಬರೆಯಲಾಗಿದೆ. ಇದರೊಂದಿಗೆ ಎರಡು ಜೀವಂತ ಬುಲೆಟ್ ಗಳನ್ನು ಇಡಲಾಗಿದೆ.
"ಬಿಜೆಪಿ ಮತ್ತು ಆರೆಸ್ಸೆಸ್ ಗಳು ಕೋಮುವಾದಿಗಳು. ಅವು ಮುಸ್ಲಿಮರ ವಿರುದ್ಧ ಕೆಲಸ ಮಾಡುತ್ತಿವೆ. ಆದ್ದರಿಂದ ನೀವೊಬ್ಬ ಮುಸ್ಲಿಮರಾಗಿ ಬಿಜೆಪಿಯಲ್ಲಿರುವುದು ತರವಲ್ಲ. ಆ ಪಕ್ಷವನ್ನು 15 ದಿನದೊಳಗೆ ಬಿಟ್ಟುಬಿಡಿ. ಇಲ್ಲವೆಂದರೆ ನಿಮ್ಮನ್ನು ಕೊಲ್ಲುತ್ತೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಅಸ್ಸಾಮಿನ ಕಚಾರ್ ಜಿಲ್ಲೆಯ ಸೊನೈ ವಿಧಾನಸಭಾ ಕ್ಷೇತ್ರದ ಶಾಸಕ ಲಷ್ಕರ್ ತಿಳಿಸಿದ್ದಾರೆ.

ಈ ಕುರಿತು ಶಾಸಕರು ನೀಡಿದ ದೂರಿನನ್ವಯ ಪತ್ರ ಬರೆದ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪತ್ರ ಬರೆದದ್ದು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಕೂಡಲೇ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುತ್ತೇವೆ ಮತ್ತು ಶಾಸಕರಿಗೆ ಸೂಕ್ತ ಭದ್ರತೆ ನೀಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications