₹500ರ ನೋಟಿನಲ್ಲಿ ಗಾಂಧೀಜಿ ಜಾಗದಲ್ಲಿ ಕಾಣಿಸಿಕೊಂಡ ಖ್ಯಾತ ನಟ!
ದೇಶದಲ್ಲಿ ಚಲಾವಣೆಯಲ್ಲಿರುವ ಎಲ್ಲ ನೋಟುಗಳಲ್ಲಿ ಸಾಮಾನ್ಯವಾಗಿ ಮಹಾತ್ಮ ಗಾಂಧೀಜಿ ಅವರ ಫೋಟೋ ಇರುವುದು ಗೊತ್ತೇ ಇದೆ. 200, 500, 2000 ಸೇರಿದಂತೆ ಎಲ್ಲ ನೋಟ್‌ಗಳಲ್ಲೂ ಗಾಂಧಿ ಅವರೇ ಫೋಟೋವನ್ನೇ ಆರ್‌ಬಿಐ ಮುದ್ರಿಸುತ್ತಿದೆ. ಆದರೆ, ಮೊದಲ ಬಾರಿಗೆ ಗಾಂಧೀಜಿ ಅವರ ಫೋಟೋ ಜಾಗದಲ್ಲಿ ಖ್ಯಾತ ನಟನ ಫೋಟೋ ಕಾಣಿಸಿಕೊಂಡಿದೆ.
ಹೌದು, ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಅವರ ಫೋಟೋ 500 ರೂಪಾಯಿ ನೋಟ್‌ನಲ್ಲಿ ಕಂಡುಬಂದಿದೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಗಾಂಧಿ ಜಯಂತಿ ಹೊತ್ತಿನಲ್ಲೇ ಇಂತಹ ಅಪಚಾರ ಮಾಡಿದ್ದು ಸರಿಯೇ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?: ಗುಜರಾತ್‌ನಲ್ಲಿ ಇಂತಹ ಹೊಸ ನೋಟು ಸದ್ದು ಮಾಡುತ್ತಿದೆ. ಗುಜರಾತ್‌ನ ಚಿನ್ನಾಭರಣ ವ್ಯಾಪಾರಿಗೆ ಬರೋಬ್ಬರಿ 1.3 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಿಸಿದ್ದಾರೆ. ವಂಚನೆಗೆ ಒಳಗಾದ ವ್ಯಾಪಾರಿ ಮೊದಲಿಗೆ ಇದನ್ನು ಅಸಲಿ ನೋಟುಗಳೆಂದೇ ನಂಬಿ ಹಣ ಸ್ವೀಕರಿಸಿದ್ದ. ಆದರೆ, ಇದರಲ್ಲಿ ಗಾಂಧೀಜಿ ಅವರ ಫೋಟೋ ಜಾಗದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರ ಫೋಟೋ ಇರುವುದು ಆನಂತರ ಗೊತ್ತಾಗಿದೆ.
ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಮೆಹುಲ್ ಠಕ್ಕರ್ ಎಂಬ ಚಿನ್ನದ ವ್ಯಾಪಾರಿಗೆ ಈ ರೀತಿ ಮೋಸ ಮಾಡಿದ್ದು, 2 ಕೆ.ಜಿ ಚಿನ್ನ ಖರೀದಿಸುವ ನೆಪದಲ್ಲಿ ವಂಚಕರು 1.3 ಕೋಟಿ ಹಣ ಇದೆ ಎಂದು ನಂಬಿಸಿ ಬ್ಯಾಗ್ ನೀಡಿದ್ದರು. ಇದರಲ್ಲಿ ಅನುಮಾನ ಬರದಂತೆ ಮೇಲೆ ಅಸಲಿ ನೋಟುಗಳನ್ನು ಇಟ್ಟಿ ಕೊಟ್ಟಿದ್ದರು. ಇದನ್ನು ವ್ಯಾಪಾರಿ ಕೈಗೆ ಕೊಟ್ಟು ಕೂಡಲೇ ಅಲ್ಲಿಂದ ವಂಚಕರು ಆತುರದಲ್ಲಿ ಎಸ್ಕೇಪ್ ಆಗಿದ್ದರು.

ಬಳಿಕ ಆ ಹಣವನ್ನು ಕೌಂಟಿಂಗ್ ಮೆಷಿನ್‌ಗೆ ಹಾಕಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ನೋಟುಗಳನ್ನು ಪರಿಶೀಲಿಸಿದಾಗ ಗಾಂಧಿ ಪೋಟೋ ಜಾಗದಲ್ಲಿ ನಟ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಇದು ನೋಡಲು ಥೇಟ್ ಗಾಂಧೀಜಿಯವರೆಂತೆಯೇ ಕಂಡುಬಂದಿದ್ದರಿಂದ ವಂಚಕರು ನಾಜೂಕಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಬಳಿಕ ಚಿನ್ನದ ವ್ಯಾಪಾರಿ ಠಕ್ಕರ್ ನವರಂಗಪುರ ಪೊಲೀಸ್ ಠಾಣೆಗೆ ತೆರಳಿ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಜೊತೆಗೆ ಈ ನಕಲಿ ನೋಟುಗಳನ್ನು ಎಲ್ಲಿ ಮುದ್ರಿಸಲಾಗಿತ್ತು ಎಂಬುದರ ಬಗ್ಗೆಯೂ ತನಿಖೆ ಶುರು ಮಾಡಿದ್ದಾರೆ.
ಈ ನೋಟಿನ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಮೀಮ್ಸ್ ಕೂಡ ಮಾಡುತ್ತಿದ್ದಾರೆ. ಇದು ಈ ಬಾರಿಯ ಗಾಂಧಿ ಜಯಂತಿಯ ವಿಶೇಷ ಎಂದು ಹಾಸ್ಯ ಮಾಡುತ್ತಿದ್ದಾರೆ. ನಟ ಅನುಪಮ್ ಖೇರ್ ಕೂಡ ಗಾಂಧೀಜಿ ಅವರನ್ನು ಹೋಲುವಂತೆಯೇ ಇದ್ದು, ನೋಡಲು ಚೆನ್ನಾಗಿದೆ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಹ್ಯಾಪಿ ಗಾಂಧಿ ಜಯಂತಿ ಎಂದೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications