ಜಮ್ಮು ಮತ್ತು ಕಾಶ್ಮೀರದಲ್ಲಿ ಲಾಕಪ್ ಡೆತ್: ತನಿಖೆಗೆ ಆದೇಶಿಸಿದ ಅಧಿಕಾರಿಗಳು
ಶ್ರೀನಗರ, ಜುಲೈ. 30: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಪೊಲೀಸ್ ಲಾಕಪ್‌ನಲ್ಲಿ ಎದೆನೋವು ಎಂದು ಹೇಳಿದ 35 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದ್ದಾರೆ.
ರಥಿಯಾನ್ ಗ್ರಾಮದ ನಿವಾಸಿ ದಲೀಪ್ ಸಿಂಗ್ ಅವರ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಮೂರು ಗಂಟೆಗಳ ಕಾಲ ಮುಖ್ಯ ಧಾರ್ ರಸ್ತೆಯನ್ನು ತಡೆದು, ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

ಉಧಮ್‌ಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ದಲೀಪ್ ಸಿಂಗ್ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಮೃತ ವ್ಯಕ್ತಿ ಇತರ ಇಬ್ಬರೊಂದಿಗೆ ಜಗಳ ಮಾಡಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿ ಶಾರದಾ ದೇವಿ ಅವರ ಪತಿಯೊಂದಿಗೆ ಜಗಳವಾಡುತ್ತಿದ್ದರು ಎಂದು ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಗದ್ದಲ ಸೃಷ್ಟಿಸಿದ ನಂತರ ಭದ್ರತಾ ಸಿಬ್ಬಂದಿ ದಲೀಪ್ ಸಿಂಗ್ ಅವರನ್ನು ಹಿಡಿದು ಪೊಲೀಸ್ ಸಿಬ್ಬಂದಿಗೆ ಹಸ್ತಾಂತರಿಸಸಿದ್ದಾರೆ. ಮಧ್ಯರಾತ್ರಿಯ ನಂತರ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.
ಎರಡು ಗಂಟೆಗಳ ನಂತರ ಅವರಿಗೆ ಲಾಕಪ್‌ನೊಳಗೆ ಎದೆನೋವು ಕಾಣಿಸಿಕೊಂಡಿತು ಮತ್ತು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಅವರ ಸಾವಿನ ಸುದ್ದಿಯು ನಗರದಲ್ಲಿ ಹರಡಿದ್ದು, ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಧಂಪುರದ ಹೆಚ್ಚುವರಿ ಉಪ ಕಮಿಷನರ್ ಜೋಗಿಂದರ್ ಸಿಂಗ್ ಜಸ್ರೋಟಿಯಾ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ವಿಚಾರಣೆಯು ಸತ್ಯಗಳನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ದಲೀಪ್ ಸಿಂಗ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ನಂತರ ಎದೆನೋವು ಕಾಣಿಸಿಕೊಂಡಿದೆ ಎಂದು ದೂರು ನೀಡಿದ್ದರು, ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಲಾಕಪ್‌ನಲ್ಲಿ ಅವರಿಗೆ ಚಿತ್ರಹಿಂಸೆ ನೀಡಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.

ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಅವರ ಸಾವಿಗೆ ಕಾರಣ ತಿಳಿಯಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಪ್ರತಿಭಟನಾಕಾರರನ್ನು ಭೇಟಿ ಮಾಡಿ ಚದುರಿಸಲು ಮನವೊಲಿಸಿದ ಜೋಗಿಂದರ್ ಸಿಂಗ್ ಜಸ್ರೋತಿಯಾ, ಈಗಾಗಲೇ ಉನ್ನತ ಮಟ್ಟದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಮತ್ತು ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications