20 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಗುಜರಾತ್ ವ್ಯಕ್ತಿಗೆ ಮರಣದಂಡನೆ
ಅಹಮದಾಬಾದ್, ಆಗಸ್ಟ್. 02: ಈ ವರ್ಷದ ಫೆಬ್ರವರಿಯಲ್ಲಿ 20 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಮತ್ತು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವಕನಿಗೆ ಗುಜರಾತ್‌ನ ವಿಶೇಷ ಸೂರತ್ ನ್ಯಾಯಾಲಯವು ಬುಧವಾರ ಮರಣದಂಡನೆ ವಿಧಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಇಸ್ಮಾಯಿಲ್ ಅಲಿಯಾಸ್ ಇಸ್ಮಾಯಿಲ್ ಯೂಸುಫ್ ಹಜತ್ ಎಂಬ ಅಪರಾಧಿಗೆ ಮರಣದಂಡನೆ ವಿಧಿಸಿ ಸೂರತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶಂಕುಂತಲಾ ಸೋಲಂಕಿ ತೀರ್ಪು ನೀಡಿದ್ದಾರೆ. "20 ತಿಂಗಳ ಮಗುವಿನ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಇಸ್ಮಾಯಿಲ್‌ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಶಂಕುಂತಲಾ ಸೋಲಂಕಿ ಇಂದು ಶಿಕ್ಷೆ ವಿಧಿಸಿದ್ದಾರೆ" ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.

ಅಪರಾಧಿ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು ಭಾರತೀಯ ದಂಡ ಸಂಹಿತೆಯ (IPC) 376AB (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸೆಕ್ಷನ್‌ಗಳ ಅಡಿಯಲ್ಲಿ ಇಸ್ಮಾಯಿಲ್‌ಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಜಿಲ್ಲಾ ಸರ್ಕಾರಿ ವಕೀಲರಾದ ನಯನ್ ಸುಖದ್ವಾಲಾ ಮಾಹಿತಿ ನೀಡಿದ್ದಾರೆ.
ನ್ಯಾಯಾಧೀಶರು ಇಸ್ಮಾಯಿಲ್ ಯೂಸುಫ್ ಹಜತ್ಗೆ ಐಪಿಸಿಯ ಸೆಕ್ಷನ್ 364 (ಅವಳನ್ನು ಕೊಲೆ ಮಾಡಲು ಅಪಹರಣ) ಮತ್ತು 366 (ಅತ್ಯಾಚಾರ ಮಾಡಲು ಸಂತ್ರಸ್ತೆಯ ಅಪಹರಣ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 1,000 ದಂಡ ವಿಧಿಸಿದ್ದಾರೆ. ಸಂತ್ರಸ್ತೆಯ ಕುಟುಂಬದ ಆರ್ಥಿಕ ಸ್ಥಿತಿಯನ್ನು ಗಮನಿಸಿದ ನ್ಯಾಯಾಲಯವು ಅಪರಾಧಿಯು ಆಕೆಯ ಕುಟುಂಬಕ್ಕೆ 10 ಲಕ್ಷ ನೀಡುವಂತೆ ಆದೇಶಿಸಿದೆ ಎಂದು ನಯನ್ ಸುಖದ್ವಾಲಾ ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಬಾಲಕಿಯ ತಂದೆಗೆ ಪರಿಚಯವಿದ್ದ ಅಪರಾಧಿ ಇಸ್ಮಾಯಿಲ್ ಫೆಬ್ರವರಿ 27 ರಂದು ತಿಂಡಿ ಖರೀದಿಸಿ ಕೊಡುವ ನೆಪದಲ್ಲಿ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ ಎಎಷ್ಟು ಹೊತ್ತಾದರೂ ಇಬ್ಬರು ಮನೆಗೆ ಹಿಂತಿರುಗಿಲ್ಲ. ಇಸ್ಮಾಯಿಲ್ ಹಿಂತಿರುಗದ ನಂತರ ಬಾಲಕಿಯ ಮನೆಯವರು ಆತಂಕಕ್ಕೊಳಗಾಗಿ, ಮಗುವನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಪೊಲೀಸರಿಗೆ ದೂರು ನೀಡಿದ್ದರು.

ಇದಾದ ಹಲವು ಗಂಟೆಗಳ ನಂತರ, ಮಗುವಿನ ನಿರ್ಜೀವ ದೇಹವು ಕಪ್ಲೆಥಾ ಗ್ರಾಮದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಹಿಂಭಾಗದ ಕೆರೆಯ ಬಳಿ ಪತ್ತೆಯಾಗಿತ್ತು. ಮಗುವಿಗೆ ಚಾಕೋಲೆಟ್ ಕೊಡಿಸಲು ಕರೆದುಕೊಂಡು ಹೋಗಿದ್ದ ಇಸ್ಮಾಯಿಲ್ ನಾಪತ್ತೆಯಾಗಿದ್ದನು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆತನನ್ನು ಸೂರತ್ ಬಳಿಯ ಹಳ್ಳಿಯೊಂದಕ್ಕೆ ಪತ್ತೆಹಚ್ಚಿದ್ದರು. ಫೆಬ್ರವರಿ 28 ರಂದು ಕಂದಮ್ಮನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದರು. ಬಾಲಕಿಯ ಮೃತ ದೇಹ ಪತ್ತೆಯಾದಾಗ ಆಕೆಯ ದೇಹದ ಮೇಲೆ ತೀವ್ರತರದ ಗಾಯಗಳು ಮತ್ತಿ ಕಿಬ್ಬೊಟ್ಟೆಯ ಭಾಗದಲ್ಲಿ ಕಚ್ಚಿದ ಗುರುತುಗಳಿದ್ದವು ಎಂದು ವರದಿಯಾಗಿದೆ.












Click it and Unblock the Notifications