50 ಲಕ್ಷ ದಾಟಿದ ಭಾರತದ ಕೊರೊನಾ ವೈರಸ್ ಪ್ರಕರಣ
ನವದೆಹಲಿ, ಸೆಪ್ಟೆಂಬರ್ 16: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು 50 ಲಕ್ಷದ ಗಡಿ ದಾಟಿದೆ. ಕಳೆದ24 ಗಂಟೆಗಳಲ್ಲಿ 90,123 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 50,20,360ಕ್ಕೆ ಏರಿಕೆಯಾಗಿದೆ. ಕೊನೆಯ ಒಂದು ಮಿಲಿಯನ್ ಪ್ರಕರಣಗಳು ಕೇವಲ 11 ದಿನಗಳಲ್ಲಿಯೇ ವರದಿಯಾಗಿರುವುದು ಆತಂಕ ಹೆಚ್ಚಿಸಿದೆ.
ಕಳೆದ 24 ಗಂಟೆಗಳಲ್ಲಿ 1,290 ಮಂದಿ ಕೊರೊನಾ ವೈರಸ್‌ಗೆ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 82,066ಕ್ಕೆ ತಲುಪಿದೆ. 39,42,361 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 9,95,933 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಬುಧವಾರದವರೆಗೆ ವರದಿಯಾದ 1,275 ಸಾವಿನ ಪ್ರಕರಣಗಳು ಇದುವರೆಗಿನ ಒಂದು ದಿನದಲ್ಲಿ ದಾಖಲಾದ ಅತ್ಯಧಿಕ ಮರಣ ಸಂಖ್ಯೆಯಾಗಿದೆ. ಭಾರತದಲ್ಲಿ ಆರಂಭದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿಯಂತ್ರಣದಲ್ಲಿದ್ದವು. ಮೊದಲ ಪ್ರಕರಣ ಪತ್ತೆಯಾದ ಬಳಿಕ 1 ಮಿಲಿಯನ್ ಪ್ರಕರಣ ತಲುಪಲು 167 ದಿನಗಳನ್ನು ತೆಗೆದುಕೊಂಡಿತ್ತು. ಇದು ಕೊರೊನಾ ವೈರಸ್ ಅತ್ಯಂತ ವ್ಯಾಪಕವಾಗಿ ಆವರಿಸಿದ ದೇಶಗಳ ನಡುವೆ ಅತಿ ನಿಧಾನಗತಿಯ ಬೆಳವಣಿಗೆಯಾಗಿತ್ತು. ಕಠಿಣ ಲಾಕ್‌ಡೌನ್ ಕಾರಣದಿಂದ ಸೋಂಕು ಹರಡುವಿಕೆ ನಿಯಂತ್ರಣದಲ್ಲಿತ್ತು.

ಆದರೆ ನಂತರದ ನಾಲ್ಕು ಮಿಲಿಯನ್ ಪ್ರಕರಣಗಳು ಕೇವಲ 61 ದಿನಗಳಲ್ಲಿ ವರದಿಯಾಗಿವೆ. ಇದು ಜಗತ್ತಿನಲ್ಲಿಯೇ ಅತಿ ವೇಗದ್ದಾಗಿದೆ. 6.7 ಮಿಲಿಯನ್ ಸೋಂಕಿನ ಪ್ರಕರಣಗಳಿರುವ ಅಮೆರಿಕ, ಭಾರತಕ್ಕಿಂತ ಮುಂದೆ ಇದೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೇ ಮಂಗಳವಾರ 1 ಮಿಲಿಯನ್ ಮುಟ್ಟಿದೆ.












Click it and Unblock the Notifications