ಬಿಹಾರದ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟಗೊಂಡು 9 ಜನರ ಸಾವು
ಪಟ್ನಾ, ಡಿಸೆಂಬರ್ 24: ಬಿಹಾರದಲ್ಲಿ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟಗೊಂಡ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ತಂಡಗಳು ಸ್ಥಳದಲ್ಲಿವೆ.
ಪ್ರಕರಣದ ಕುರಿತು ಖೇದ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಮೃತರ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಘೋಷಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮೋತಿಹಾರಿ ಪೊಲೀಸರು, 'ರಾಮಘರ್ವಾ ಪಿಎಸ್‌ನ ನಾರೀಗಿರ್‌ನಲ್ಲಿ ಇಟ್ಟಿಗೆ ಗೂಡಿನ ಚಿಮಣಿ ಸ್ಫೋಟದಿಂದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.

'ನರಿಗಿರ್‌ನ ಇಟ್ಟಿಗೆ ಗೂಡಿನ ಚಿಮಣಿಯಲ್ಲಿ ಸ್ಫೋಟದಿಂದಾಗಿ ಹಲವು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಏಳರಿಂದ ಎಂಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಮೂವರನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದೆ' ಎಂದು ಮೋತಿಹಾರಿ ಎಸ್‌ಆರ್‌ಪಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಸುಜಿತ್ ಕುಮಾರ್ ತಿಳಿಸಿದ್ದಾರೆ.
ಮೋತಿಹಾರಿಯ ರಾಮಗರ್ವಾ ಪ್ರದೇಶದ ಇಟ್ಟಿಗೆ ಗೂಡಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ಇಟ್ಟಿಗೆ ಗೂಡು ಮಾಲೀಕ ಮೊಹಮ್ಮದ್ ಇಶ್ರಾರ್ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯೂ ಮುಂದುವರೆದಿದೆ' ಎಂದು ಬಿಹಾರ ಪೊಲೀಸ್ ಪ್ರಧಾನ ಕಚೇರಿ ಹೇಳಿಕೆ ತಿಳಿಸಿದೆ.
ಸ್ಥಳದಲ್ಲಿ ಹಲವಾರು ಅಗ್ನಿಶಾಮಕ ಲಾರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಸಾವಿನ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ದೇವರು ಸಂತ್ರಸ್ತ ಕುಟುಂಬಗಳಿಗೆ ಜೀವಹಾನಿಯನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಅವರು ಹೇಳಿದ್ದಾರೆ.
ಎಲ್ಲಾ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಮಿಳುನಾಡಿನಲ್ಲಿ 8 ಮಂದಿ ಬಲಿ
ಶಬರಿಮಲೆಯಿಂದ ವಾಪಸಾಗುತ್ತಿದ್ದ 8 ಭಕ್ತರು ಶುಕ್ರವಾರ ತಮಿಳುನಾಡಿನ ಥೇಣಿ ಜಿಲ್ಲೆಯ ಕುಮಿಲಿ ಮೌಂಟೇನ್ ಪಾಸ್‌ನಲ್ಲಿ ಕಾರು ಅಪಘಾತದಿಂದ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರು ಥೇಣಿ-ಆಂಡಿಪೆಟ್ಟಿ ಮೂಲದವರು.
ಎಎನ್‌ಐ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಕೆವಿ ಮುರಳೀಧರನ್, ಥೇಣಿ ಜಿಲ್ಲೆಯ ಕುಮಿಲಿ ಮೌಂಟೇನ್ ಪಾಸ್‌ನಲ್ಲಿ ಕಾರು 40 ಅಡಿ ಆಳದ ಹೊಂಡಕ್ಕೆ ಉರುಳಿ ಎಂಟು ಭಕ್ತರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications