8th Pay Commission: ಚುನಾವಣೆಗೆ ಹೇಗೆ ಸಹಕಾರಿಯಾಗಲಿದೆ ಸರ್ಕಾರದ ತೀರ್ಮಾನ
ನವದೆಹಲಿ, ಜನವರಿ 24: ದೆಹಲಿ ವಿಧಾನಸಭೆ ಚುನಾವಣೆ-2025ರ ಪ್ರಚಾರ ಬಿರುಸಿನಿಂದ ಸಾಗಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಕಣದಲ್ಲಿ 699 ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಯಾರಿಗೆ? ಎಂಬುದು ಸದ್ಯದ ಪ್ರಶ್ನೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಎಎಪಿ, ಕಾಂಗ್ರೆಸ್ ಪ್ರಮುಖ ಪಕ್ಷಗಳು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ದೆಹಲಿಯ ಅಧಿಕಾರ ಸಿಗಲಿದೆಯೇ? ಎಂಬ ಚರ್ಚೆಗಳು ಆರಂಭವಾಗಿವೆ. ಕೇಂದ್ರ ಸರ್ಕಾರದ ಯೋಜನೆಗಳು ಹೇಗೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ? ಎಂದು ಚರ್ಚೆಗಳು ನಡೆಯುತ್ತಿವೆ.

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗೆ ಸ್ಪಂದಿಸಿದೆ. 8ನೇ ವೇತನ ಆಯೋಗ ರಚನೆ ಮಾಡಲು ಒಪ್ಪಿಗೆ ಕೊಟ್ಟಿದೆ. ಈ ತೀರ್ಮಾನ ದೆಹಲಿ ಚುನಾವಣೆಗೆ ಸಹಕಾರಿಯಾಗಲಿದೆಯೇ?. ಈ ತೀರ್ಮಾನದಿಂದ 1.15 ಕೋಟಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿಜೆಪಿಗೆ ಹೇಗೆ ಸಹಕಾರಿಯಾಗಲಿದೆ?; ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚನೆ ಮಾಡಲು ಅನುಮತಿ ನೀಡಲಾಗಿದೆ. 7ನೇ ವೇತನ ಆಯೋಗದ ಅವಧಿ 2026ಕ್ಕೆ ಅಂತ್ಯಗೊಳ್ಳಲಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ 8ನೇ ವೇತನ ಆಯೋಗ ರಚನೆ ತೀರ್ಮಾನದಿಂದ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು, 65 ಲಕ್ಷ ಪಿಂಚಣಿದಾರರು ಸೇರಿ 1.15 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ವೇತನ ಆಯೋಗದ ವರದಿ ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಪರಿಷ್ಕರಣೆ ಆಗಲಿದೆ.
ಮಾಹಿತಿಗಳ ಪ್ರಕಾರ ದೆಹಲಿಯಲ್ಲಿ ಸುಮಾರು 4 ಲಕ್ಷ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ. ಇದರಲ್ಲಿ ರಕ್ಷಣಾ ಇಲಾಖೆಯ ಉದ್ಯೋಗಿಗಳು, ದೆಹಲಿ ಸರ್ಕಾರದ ಉದ್ಯೋಗಿಗಳು ಸೇರಿದ್ದಾರೆ. ಇವರಿಗೆ 8ನೇ ವೇತನ ಆಯೋಗದ ವರದಿ ಲಾಭ ಸಿಗಲಿದೆ.
7ನೇ ವೇತನ ಆಯೋಗದ ವರದಿ ಜಾರಿಗೆ ಬಂದಾಗ ದೆಹಲಿ ಸರ್ಕಾರಿ ಉದ್ಯೋಗಿಗಳ ವೇತನ ಏರಿಕೆಯಾಗಿತ್ತು. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾದಾಗ ಮಾತ್ರ ದೆಹಲಿ ಸರ್ಕಾರ ತನ್ನ ನೌಕರರ ವೇತನ ಹೆಚ್ಚಳ ಮಾಡುತ್ತದೆ.
ವೇತನ ಆಯೋಗದ ವರದಿ ಶಿಫಾರಸು ಜಾರಿ ಬಳಿಕ ಆರ್ಥಿಕ ಬೆಳವಣಿಗೆಗೆ ಸಹ ಸಹಕಾರಿಯಾಗಿದೆ. ಸರ್ಕಾರಿ ನೌಕರರ ಜೀವನ ಮಟ್ಟವು ಸುಧಾರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡುತ್ತದೆ. ಆಯೋಗದ ಶಿಫಾರಸುಗಳ ಅನ್ವಯ ವೇತನ ಮಾತ್ರವಲ್ಲ ನೌಕರರ ತುಟ್ಟಿಭತ್ಯೆಯನ್ನು ಸಹ ಹೆಚ್ಚಳ ಮಾಡಲಾಗುತ್ತದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 3 ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿದೆ. 70 ಸೀಟುಗಳ ಪೈಕಿ ಬಿಜೆಪಿ 68 ಸೀಟುಗಳಲ್ಲಿ ಕಣಕ್ಕಿಳಿದಿದೆ, ಎರಡು ಸೀಟುಗಳನ್ನು ಎನ್‌ಡಿಎ ಮಿತ್ರಪಕ್ಷ ಜೆಡಿಯುಗೆ ಬಿಟ್ಟುಕೊಟ್ಟಿದೆ.












Click it and Unblock the Notifications