80s trend: 80ರ ದಶಕದ ನೆನಪುಗಳ ಮೋಡಿ: ಸಾಧನಾ ಕಟ್‌, ಕ್ಯಾಸೆಟ್‌, ಬೆಲ್‌ಬಾಟಮ್‌ ಮತ್ತೆ ಜೀವ ಪಡೆದಿದ್ದು ಹೇಗೆ?

80s trend: ಒಮ್ಮೆ ಇನ್‌ಸ್ಟಾ ಅಥವಾ ಫೇಸ್‌ಬುಕ್‌ಗೆ ಹೋಗಿ ನೋಡಿ. ಅಥವಾ ಎಕ್ಸ್‌ ಆದರೂ ಓಕೆ. ನಮ್ಮನಿಮ್ಮಂಥ ಸಾಮಾನ್ಯರು ಓಕೆ, ಸೆಲೆಬ್ರಿಟಿಗಳು ಕೂಡ 80ರ ದಶಕದ (80s trend) ಉಡುಗೆಯಲ್ಲಿ, ಹಳೇ ಮಾರುತಿ ಅಥವಾ ಪ್ರೀಮಿಯರ್‌ ಅಥವಾ ಸ್ಟುಡ್‌ಬೇಕರ್‌ ಕಾರಿಗೆ ಒರಗಿ ನಿಂತಿರುವುದನ್ನು ನೋಡುತ್ತೀರಿ. ಆ ಕಾಲದ ಟ್ರೆಂಡಿ ಹೇರ್‌ಕಟ್‌. ಮಹಿಳೆಯರಿಗಾದರೆ ಸಾಧನಾ ಕಟ್‌ ಅಥವಾ ಜೀನತ್‌ ಅಮಾನ್‌ ಹೇರ್‌ಕಟ್.‌ ಪುರುಷರಾದರೆ ವೆಂಗ್‌ಸರ್ಕಾರ್‌ ಸ್ಟೈಲ್‌ ಅಥವಾ ಬಾಬ್ಬಿ ಡಿಯೋಲ್‌ ಶೈಲಿ. ಇಡೀ ಸೋಶಿಯಲ್‌ ಮೀಡಿಯಾ ಹಳೆಯ ಕಲರ್‌ ಟೋನ್‌ಗಳಿಂದ ಗಿಜಿಗುಡುತ್ತಿದೆ. ಮಸುಕು ಮಸುಕಾದ ಆವರಣಗಳು, ಆ ಕಾಲದ ಟ್ರೆಂಡಿ ಬ್ಲೂ ಜೀನ್ಸ್‌ ಮತ್ತು ಜ್ಯಾಕೆಟ್‌, ಸ್ಕರ್ಟ್‌, ಇತ್ಯಾದಿ ಇತ್ಯಾದಿ.

80s trend Why Is Everyone Going Back to the 80s The Retro Trend Has Taken Social Media by Storm

ಈಗ ವಯಸ್ಸಾದವರು ಹಳೆಯ ದಿನಗಳಿಗೆ ಮರಳಿದ ಫೀಲ್‌ ಅನುಭವಿಸಿದರೆ, 80ರಲ್ಲಿ ಹುಟ್ಟಿಯೇ ಇಲ್ಲದವರೆಲ್ಲ, ತಾವು ಆಗ ಇದ್ದರೆ ಹೇಗೆ ಇದ್ದಿರಬಹುದು ಎಂದು ನೋಡಿಕೊಳ್ಳುತ್ತಾರೆ. ಇದು ಟ್ರೆಂಡ್‌ನಲ್ಲಿರುವುದರ ಹಸಿವು. ಸದ್ಯ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ. ಇದನ್ನು ಮಾಡುವುದು ಕಷ್ಟವೇನಿಲ್ಲ. ಚಾಟ್‌ಜಿಪಿಟಿ ಅಥವಾ ಜೆಮಿನಿ ಎಐಗೆ ನಿಮ್ಮ ಫೋಟೋ ಅಪ್‌ಲೋಡ್‌ ಮಾಡಿ 80 ದಶಕದ ಸ್ಟೈಲ್‌ನಲ್ಲಿ ಕೊಡು ಎಂದರಾಯಿತು. ಸುಲಭ. ಹೀಗಾಗಿಯೇ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ ಅನ್ನಲೂಬಹುದು.

ನೆನಪಾಗಿ ಉಳಿದ ಕಾಲಘಟ್ಟಗಳು

ಕೆಲವು ಕಾಲಘಟ್ಟಗಳು ಕಳೆದುಹೋಗದೆ ನೆನಪಾಗಿ ನಮ್ಮೊಳಗೆ ಉಳಿದುಕೊಳ್ಳುತ್ತವೆ. 80ರ ದಶಕವೂ ಅಂಥದ್ದೇ ಒಂದು ಕಾಲ. ಇಂದಿನಂತೆ ಪ್ರತಿದಿನ ಹೊಸ ಫ್ಯಾಷನ್‌ (fashion), ಹೊಸ ಟ್ರೆಂಡ್‌ ಹುಟ್ಟುತ್ತಿದ್ದ ಕಾಲವಲ್ಲ ಅದು. ಆದರೆ ಆ ಕಾಲದ ಉಡುಗೆ, ಹೇರ್‌ಸ್ಟೈಲ್‌, ಹಾಡು, ಸಿನಿಮಾ, ಸಂಗೀತ, ಮನೆಗಳ ಅಲಂಕಾರ... ಎಲ್ಲದರಲ್ಲೂ ಒಂದು ವಿಶಿಷ್ಟವಾದ ಸರಳತೆ ಇತ್ತು. 80ರ ದಶಕದ ಫ್ಯಾಷನ್‌ ಮತ್ತೆ ಟ್ರೆಂಡ್‌ಗೆ ಬಂದಿರುವ ಈ ಹೊತ್ತಿನಲ್ಲಿ, ನಮ್ಮ ಬಾಲ್ಯ ಅಥವಾ ಯೌವನದ ಯಾವುದೋ ಒಂದು ಪುಟ ಮತ್ತೆ ತೆರೆದಂತೆ ಭಾಸವಾಗುವುದೇ ಇದರ ಮ್ಯಾಜಿಕ್.‌

ಆ ಕಾಲದ ಚೌಕುಳಿ ಗಾಢ ಬಣ್ಣಗಳ ಶರ್ಟ್‌ಗಳ ವಿನ್ಯಾಸ, ದೊಡ್ಡ ಕಾಲರ್‌, ಬಣ್ಣಬಣ್ಣದ ಬಟ್ಟೆಗಳು, ಬೆಲ್‌ಬಾಟಮ್‌ ಪ್ಯಾಂಟ್‌, ದೊಡ್ಡ ಗಡಿಯಾರ, ಕೂದಲಿನ ವಿಭಿನ್ನ ಶೈಲಿ, ಹಳೇ ಕಾರುಗಳು, ಪಕ್ಕದಲ್ಲಿ ಟೇಪ್‌ ರೆಕಾರ್ಡರ್‌, ರೇಡಿಯೋ, ಲ್ಯಾಂಡ್‌ಲೈನ್‌ ಫೋನ್‌... ಇವೆಲ್ಲವೂ ಇಂದಿನ ಪೀಳಿಗೆಗೆ ವಿಚಿತ್ರವಾಗಿ ಕಾಣಬಹುದು. ಆದರೆ 80ರ ದಶಕವನ್ನು ಕಂಡವರಿಗೆ ಇವೆಲ್ಲವೂ ಬದುಕಿನ ಭಾಗವಾಗಿದ್ದವು. ಅದರಲ್ಲಿ ಎಷ್ಟನ್ನು ಉಳಿಸಿಕೊಂಡಿದ್ದೇವೆ? ಗೊತ್ತಿಲ್ಲ.

ಪರ್ಫೆಕ್ಟ್ ಆಗಿ ಕಾಣಿಸೋ ಒತ್ತಡವಿರಲಿಲ್ಲ

ಅಂದಿನ ಫೋಟೋಗಳನ್ನು ನೋಡಿದಾಗ ಮತ್ತೊಂದು ವಿಷಯ ಗಮನಕ್ಕೆ ಬರುತ್ತದೆ. ಎಲ್ಲರೂ ಇಂದಿನಂತೆ 'ಪರ್ಫೆಕ್ಟ್‌' ಆಗಿ ಕಾಣಬೇಕೆಂಬ ಒತ್ತಡದಲ್ಲಿರಲಿಲ್ಲ. ಫೋಟೋ ತೆಗೆಯಲು ವಿಶೇಷ ಸಂದರ್ಭ ಬೇಕಿತ್ತು. ಉದಾಹರಣೆಗೆ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಸೆಂಡ್‌ಆಫ್‌ ಕಾರ್ಯಕ್ರಮ. ಕಾಲೇಜಿನ ಕೊನೇ ದಿನ ಹೀಗೆ. ಸ್ಟುಡಿಯೋಗೆ ಹೋಗಿ ಅಥವಾ ಫೋಟೋಗ್ರಾಫರ್‌ ಅನ್ನು ಕರೆಸಿ ತೆಗೆಯಬೇಕಿತ್ತು. ಫೋಟೋ (photo) ತೆಗೆಯಲು ಪರಿಣತಿ ಇರಬೇಕಿತ್ತು. ಒಳ್ಳೇ ಕ್ಯಾಮೆರಾ ಕೂಡ ಇರಬೇಕಿತ್ತು. ಫೋಟೋ ತೆಗೆಯುವಾಗ ಪೋಸ್‌ ಕೊಟ್ಟು ನಿಲ್ಲುತ್ತಿದ್ದೆವು. ಆ ಚಿತ್ರಗಳಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೂ, ಅದೇ ಅವುಗಳ ಸೌಂದರ್ಯವಾಗಿ ದಾಖಲಾಗುತ್ತಿತ್ತು.

ಸಿನಿಮಾಗಳೂ ಆ ಕಾಲದ ಫ್ಯಾಷನ್‌ಗೆ ದೊಡ್ಡ ಪ್ರಭಾವ ಬೀರಿದ್ದವು. ನಾಯಕರು ಧರಿಸಿದ ಶರ್ಟ್‌, ನಾಯಕಿಯರ ಸೀರೆ, ಕೂದಲಿನ ವಿನ್ಯಾಸ, ಕನ್ನಡಕ, ಶೂ... ಮರುದಿನವೇ ಯುವಕರಲ್ಲಿ ಅದೇ ಸ್ಟೈಲ್‌ ಕಾಣಿಸಿಕೊಳ್ಳುತ್ತಿತ್ತು. ಒಂದು ಸಿನಿಮಾ, ಒಂದು ಹಾಡು ಅಥವಾ ಒಬ್ಬ ನಟನ ಸ್ಟೈಲ್‌ ಇಡೀ ಪೀಳಿಗೆಯ ಫ್ಯಾಷನ್‌ ಬದಲಿಸುವಷ್ಟು ಪ್ರಭಾವಶಾಲಿಯಾಗಿತ್ತು. ಆ ಕಾಲದ ಸಂಗೀತಕ್ಕೂ ತನ್ನದೇ ಆದ ಮೋಡಿ ಇತ್ತು. ಕ್ಯಾಸೆಟ್‌ ಹಾಕಿ ಹಾಡು ಕೇಳುವುದು, ಇಷ್ಟವಾದ ಹಾಡನ್ನು ಮತ್ತೆ ಮತ್ತೆ ರಿವೈಂಡ್‌ ಮಾಡುವುದು, ರೇಡಿಯೋದಲ್ಲಿ ನಮ್ಮ ನೆಚ್ಚಿನ ಹಾಡಿಗಾಗಿ ಕಾಯುವುದು... ಇವೆಲ್ಲವೂ ಇಂದು ನಿಧಾನವಾಗಿ ಕಳೆದುಹೋದ ಅನುಭವಗಳು.

ಮನಸ್ಸಿಗೆ ಮುದ ನೀಡಿದ 80s trend

ಅದಕ್ಕೇ 80ರ ದಶಕದ ಟ್ರೆಂಡ್‌ ಇಂದು ಮತ್ತೆ ಬಂದಾಗ ಮನಸ್ಸಿಗೆ ಖುಷಿಯಾಗುತ್ತದೆ. ಹಳೆಯ ಫ್ಯಾಷನ್‌ (fashion) ಮತ್ತೆ ಹೊಸದಾಗಿ ಕಾಣಿಸುತ್ತದೆ. ಅದರೊಂದಿಗೆ ನಮ್ಮ ಹಳೆಯ ನೆನಪುಗಳೂ ಮರಳಿ ಬರುತ್ತವೆ. ನಾವು ಆ ಬಟ್ಟೆಗಳನ್ನು, ಹೇರ್‌ಸ್ಟೈಲ್‌ಗಳನ್ನು, ವಸ್ತುಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಆ ಕಾಲವನ್ನೇ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ.

ಇಂದು ಎಲ್ಲವೂ ವೇಗವಾಗಿ ಬದಲಾಗುತ್ತದೆ. ಇಂದು ಇದ್ದ ಟ್ರೆಂಡ್‌ ನಾಳೆ ಇಲ್ಲ. ಹೊಸ ಟ್ರೆಂಡ್‌ ಬಂದು ಹೋಗಲು ಒಂದು ದಿನ ಸಾಕು. ಆದರೆ 80ರ ದಶಕದ ಟ್ರೆಂಡ್‌ಗಳು ವರ್ಷಗಳ ನಂತರವೂ ನೆನಪಿನಲ್ಲಿ ಉಳಿದಿವೆ. ಅಂದು ಟ್ರೆಂಡ್‌ಗಳು ಬಂದರೆ ವರ್ಷಗಟ್ಟಲೆ ಉಳಿಯುತ್ತಿದ್ದವು. ಉದಾಹರಣೆಗೆ ಸಾಧನಾ ಕಟ್.‌ ಬೆಲ್‌ ಬಾಟಮ್‌ ಪ್ಯಾಂಟ್.‌ ಫ್ಯಾಷನಬಲ್‌ ವಸ್ತುಗಳು ಕಡಿಮೆ ಇದ್ದರೂ, ನೆನಪುಗಳು ಉಳಿಯುತ್ತಿದ್ದವು.

ಅಪಾಯವೂ ಇದೆ

ಆದರೆ, ಮರೆಯಬಾರದ ಒಂದು ಸಂಗತಿ ಅಂದರೆ, ಈ ಟ್ರೆಂಡ್‌ನಲ್ಲಿ ಭಾಗಿಯಾಗುವಾಗ ನಾವು ಪರಿಸರಕ್ಕೆ ಎಷ್ಟು ಹೊರೆ ಹಾಕುತ್ತಿದ್ದೇವೆ ಎನ್ನುವುದೂ ನೆನಪಿಡಬೇಕು. ನಾವು ಬಳಸುವ ಎಐ ಮಾದರಿಗಳು ಸಾವಿರಾರು, ಲಕ್ಷಾಂತರ ಶಕ್ತಿಶಾಲಿ ಜಿಪಿಯುಗಳ ಮೇಲೆ ಕೆಲಸ ಮಾಡುತ್ತವೆ. ಇವು ಕೆಲಸ ಮಾಡುವಾಗ ಅಪಾರ ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಆ ಶಾಖವನ್ನು ಹೊರಹಾಕಲು ಡೇಟಾ ಸೆಂಟರ್‌ಗಳಲ್ಲಿ ವಿವಿಧ ರೀತಿಯ ಕೂಲಿಂಗ್ ವ್ಯವಸ್ಥೆಗಳನ್ನು, ನೀರನ್ನು ಬಳಸಲಾಗುತ್ತದೆ. ಡೇಟಾ ಸೆಂಟರ್‌ಗೆ ವಿದ್ಯುತ್ ಉತ್ಪಾದಿಸುವಾಗಲೂ ಕೆಲವು ವಿದ್ಯುತ್ ಸ್ಥಾವರಗಳು ನೀರನ್ನು ಬಳಸುತ್ತವೆ.

2023ರಲ್ಲಿ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ರಿವರ್‌ಸೈಡ್‌ನ ಸಂಶೋಧಕರು ಮಾಡಿದ ಅಂದಾಜಿನ ಪ್ರಕಾರ, ಸುಮಾರು 20ರಿಂದ 50 ಪ್ರಶ್ನೆ-ಉತ್ತರಗಳಿಗಾಗಿ 500 ಮಿಲಿಲೀಟರ್ ನೀರಿನ ಬಳಕೆಯಾಗುತ್ತದೆ. ಸುಮಾರು ಒಂದು ಕೋಟಿ ಅಥವಾ ಎರಡು ಕೋಟಿ ಜನ ತಮ್ಮ ಒಂದು ಫೋಟೋ ಅಪ್‌ಡೇಟ್‌ ಮಾಡಲು ಎಐಯಲ್ಲಿ ಎಷ್ಟು ಕೋಟಿ ಲೀಟರ್‌ ನೀರು ಖರ್ಚಾಗಬಹುದು ಎಂದು ಒಮ್ಮೆ ನೀವೇ ಊಹಿಸಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+