ರಾಜಸ್ಥಾನದ ಐತಿಹಾಸಿಕ ಬಾವಿಗಳಿಗೆ ಮರುಜೀವ ನೀಡಿದ ಐರ್ಲೆಂಡ್‌ನ 80ರ ಅಜ್ಜ: ಈ 'ಪಾಗಲ್ ಸಾಬ್' ಕಥೆ ಕೇಳಿದ್ರೆ ನೀವೂ ಸಲಾಂ ಅಂತೀರಾ
ರಾಜಸ್ಥಾನದ 'ಬ್ಲೂ ಸಿಟಿ' ಖ್ಯಾತಿಯ ಜೋಧ್‌ಪುರಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಮೆಹ್ರಾನ್‌ಗಢ ಕೋಟೆ, ಜಸ್ವಂತ್ ಥಾಡಾ ಮತ್ತು ಬಣ್ಣಬಣ್ಣದ ಮಾರುಕಟ್ಟೆಗಳನ್ನ ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದರೆ, ಈ ಐತಿಹಾಸಿಕ ನಗರದ ಕಿರಿದಾದ ಬೀದಿಗಳಲ್ಲಿರುವ ಶತಮಾನಗಳಷ್ಟು ಹಳೆಯದಾದ ಮೆಟ್ಟಿಲು ಬಾವಿಗಳು ಮನುಷ್ಯನ ಬೇಜವಬ್ದಾರಿತನ ಮತ್ತು ನಿರ್ಲಕ್ಯದಿಂದಾಗಿ ಪ್ಲಾಸ್ಟಿಕ್ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದನ್ನು ಪ್ರವಾಸಿಗರು ಗಮನಿಸುವುದೇ ಅಪರೂಪ.
ಏಕೆಂದರೆ ಆ ಕಸದ ರಾಶಿಯಲ್ಲಿ ಪ್ರವಾಸಿಗರು ಹೇಗೆ ಮೆಟ್ಟಿಲು ಬಾವಿಗಳನ್ನ ಹುಡುಕುವುದು ಅಲ್ಲವೇ? ಹೀಗೆ ಕಸದ ಮಯವಾಗಿದ್ದ ಪ್ರಾಚೀನ ಬಾವಿಗಳಿಗೆ ಮರುಜೀವ ನೀಡುವ ಮೂಲಕ ಐರ್ಲೆಂಡ್ ಮೂಲದ 80 ವರ್ಷದ ವೃದ್ಧರೊಬ್ಬರು ಸ್ಥಳೀಯರ ಪಾಲಿಗೆ 'ಹೀರೋ' ಆಗಿದ್ದಾರೆ. ಇವರ ಬಗ್ಗೆ ನಿಮಗೆ ಗೊತ್ತಾ.. ಇದು ಕಟ್ಟು ಕಥೆಯಲ್ಲ.. ಆ ಹೀರೋ ಯಾರು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ನಮ್ಮ ಹೀರೋ ಹೆಸರು ಕ್ಯಾರನ್ ರಾನ್ಸ್ಲೆ. ಇವರು 2014ರಲ್ಲಿ ತಮ್ಮ ತಾಯಿಯ ಬಾಲ್ಯದ ನೆನಪುಗಳನ್ನ ಹುಡುಕಿಕೊಂಡು ನಮ್ಮ ಭಾರತಕ್ಕೆ ಬಂದಿದ್ದರು. ಅವರ ತಾಯಿ ಬ್ರಿಟಿಷ್ ಕಾಲದಲ್ಲಿ ಕಾಶ್ಮೀರದಲ್ಲಿ ಬೆಳೆದವರು ಹಾಗೂ ಜೋಧ್‌ಪುರದಲ್ಲಿ ಸಂಬಂಧಿಕರು ಕೂಡ ಇದ್ದರಂತೆ. ಈ ಪಯಣದ ವೇಳೆಯಲ್ಲಿ ಜೋಧ್‌ಪುರದ ಐತಿಹಾಸಿಕ ಬೀದಿಗಳಲ್ಲಿ ಸುತ್ತಾಡುತ್ತಿದ್ದ ರಾನ್ಸ್ಲೆ ಅವರಿಗೆ, ಅಲ್ಲಿನ ಅದ್ಭುತ ವಾಸ್ತುಶಿಲ್ಪದ ಮೆಟ್ಟಿಲು ಬಾವಿಗಳು ಮತ್ತು ಜಲರಾ ಅಂದರೆ ಮೆಟ್ಟಿಲುಗಳಿರುವ ಜಲಾಶಯಗಳು ಪ್ಲಾಸ್ಟಿಕ್ ಹಾಗೂ ಕಸದ ರಾಶಿಯಿಂದ ತುಂಬಿರುವುದು ಕಂಡು ತೀವ್ರ ಬೇಸರವಾಯಿತು.
'ಪಾಗಲ್ ಸಾಬ್'ನಿಂದ ಜೋಧ್‌ಪುರದ ಆಕ್ವಾಮ್ಯಾನ್ ಆಗಿ ಬಡ್ತಿ
ಅವರು ಭಾರತಕ್ಕೆ ಬರುವಾಗ ಅವರೇನು ಪರಿಸರವಾದಿಯಾಗಿರಲಿಲ್ಲ ನೋಡಿ. ಆದರೆ, ಪ್ರಾಚೀನ ಜಲ ಸಂರಕ್ಷಣಾ ವ್ಯವಸ್ಥೆಗಳು ಈ ರೀತಿ ಹಾಳಾಗುತ್ತಿರುವುದನ್ನು ಕಂಡ ರಾನ್ಸ್ಲೆ, ಕೈಯಲ್ಲೊಂದು ಮರದ ಕೋಲು ಹಿಡಿದು ಏಕಾಂಗಿಯಾಗಿ ಮೆಟ್ಟಿಲು ಬಾವಿಗಳ ಸ್ವಚ್ಛತೆಗೆ ಮುಂದಾದರು. ಆರಂಭದಲ್ಲಿ ಇವರ ಕೆಲಸ ನೋಡಿದ ಸ್ಥಳೀಯರು ಇವರನ್ನು 'ಪಾಗಲ್ ಸಾಬ್' ಅಂದರೆ ಕನ್ನಡದಲ್ಲಿ ಹುಚ್ಚು ಅಜ್ಜ ಎಂದು ಕರೆದು ರೇಗಿಸಿದರು.
ಆದರೆ, ಕ್ಯಾರನ್ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ವರ್ಷಗಳ ಕಾಲ ತಮ್ಮ ಕೆಲಸವನ್ನಾ ಹೀಗೆಯೇ ಮುಂದುವರಿಸಿದ್ದಾರೆ. ನಂತರದ ದಿನಗಳಲ್ಲಿ ಅವರ ಈ ಕೆಲಸವನ್ನಾ ನೋಡಿದ ಸ್ಥಳೀಯರು ಹಾಗೂ ಸ್ವಯಂಸೇವಕರು ಅವರ ಜೊತೆ ಕೈಜೋಡಿಸಿದರು. ಇಂದು ಇವರ ಶ್ರಮದಿಂದಾಗಿ ಮೈಲಾ ಬಾಗ್ ಕಾ ಜಲರಾ ಸೇರಿದಂತೆ ಹಲವು ಐತಿಹಾಸಿಕ ಜಲಮೂಲಗಳು ಮರುಜೀವ ಪಡೆದಿವೆ. ಇದೇ ಕಾರಣಕ್ಕೆ ಸ್ಥಳೀಯರು ಈಗ ಇವರನ್ನು ಪ್ರೀತಿಯಿಂದ ಜೋಧ್‌ಪುರದ 'ಆಕ್ವಾಮ್ಯಾನ್' ಎಂದು ಕರೆಯುತ್ತಾರೆ.
ಆನಂದ್ ಮಹೀಂದ್ರಾ ಮೆಚ್ಚುಗೆ
ಇತ್ತೀಚೆಗೆ ಕ್ಯಾರನ್ ರಾನ್ಸ್ಲೆ ಅವರ ಈ ನಿಸ್ವಾರ್ಥ ಸೇವೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಕ್ಸ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದರು. "ಭಾರತದ ಮೆಟ್ಟಿಲು ಬಾವಿಗಳನ್ನ ಪುನರುಜ್ಜೀವನಗೊಳಿಸಲು 'ಪಾಗಲ್' ಅಥವಾ 'ಫಿರಂಗಿ' (ವಿದೇಶಿ) ಆಗಿರಬೇಕಿಲ್ಲ. ಜೋಧ್‌ಪುರದ ಮೇಲಿನ ಅವರ ಪ್ರೀತಿ ಹಾಗೂ ನಮ್ಮ ಪರಂಪರೆಯನ್ನ ಉಳಿಸುವ ಅವರ ಉತ್ಸಾಹಕ್ಕೆ ನನ್ನದೊಂದು ಸಲಾಂ" ಎಂದು ಕೊಂಡಾಡಿದ್ದರು.
They nicknamed 80 year old Irishman, Caron Rawnsley, ‘Paagal Saab’ for his obsession with cleaning Jodhpur’s Bawris & Jhalaras.
— anand mahindra (@anandmahindra) July 10, 2026
Fortunately, today, you don’t need to be either ‘paagal’ or ‘phirang’ to devote yourself to reviving India’s stepwells.
Earlier this year, I had… pic.twitter.com/xKTUzO72Zx
ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಅವರು ಸಹ ಇತ್ತೀಚೆಗೆ ಕ್ಯಾರನ್ ಅವರನ್ನು ಭೇಟಿಯಾಗಿ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಕ್ಯಾರನ್, "ಭಾರತವೇ ನನ್ನ ದೇಶ, ನಾನೀಗ ಭಾರತದ ಒಂದು ಭಾಗ" ಎಂದು ಹೇಳಿ ಭಾವುಕರಾಗಿದ್ದಾರೆ.
ಪ್ರವಾಸಕ್ಕೆ ತೆರಳುವವರು ಕೇವಲ ಫೋಟೋಗಳನ್ನು ತೆಗೆದುಕೊಂಡು ಬರುವುದಲ್ಲದೆ, ಅಲ್ಲಿನ ಪರಿಸರವನ್ನ ಸ್ವಚ್ಛವಾಗಿಡುವ ಮೂಲಕ ಹೇಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬುದಕ್ಕೆ ಕ್ಯಾರನ್ ರಾನ್ಸ್ಲೆ ಅವರ ಈ ಕಥೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಪಾಠವಾಗಿದೆ. ತಾಯಿಯ ನೆನಪುಗಳನ್ನ ಅರಸಿ ಬಂದ ಆ ವ್ಯಕ್ತಿ ಮರಳಿ ತಾಯ್ನಾಡಿಗೆ ಹೋಗದೆ ಭಾರತದ ಪಾರಂಪರಿಕ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದ್ದಾರೆ.


Click it and Unblock the Notifications
