ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್
ನವದೆಹಲಿ, ಜುಲೈ 05: ಜೂನ್ 17ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, 17ನೇ ಲೋಕಸಭೆಯ ಈ ಅಧಿವೇಶನದಲ್ಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 05ರಂದು ಚೊಚ್ಚಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಮೋದಿ ಸರ್ಕಾರ್ 2.0 ನ ಚೊಚ್ಚಲ ಬಜೆಟ್ ನಲ್ಲಿ ಸರ್ಕಾರಿ ನೌಕರರ ಬೇಡಿಕೆ, 7ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ, ನಿವೃತ್ತಿ ವಯಸ್ಸು ಏರಿಕೆ, ಕನಿಷ್ಟ ವೇತನ ಮೊತ್ತ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಕಂಡು ಬಂದಿಲ್ಲ.
ಮೋದಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಟ ವೇತನ ಏರಿಕೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸರ್ಕಾರಿ ನೌಕರರ ನಿರೀಕ್ಷೆ ಮತ್ತೆ ಸುಳ್ಳಾಗಿದೆ. 7ನೇ ವೇತನ ಆಯೋಗ ಶಿಫಾರಸ್ಸಿನ ಅನ್ವಯ ಹೊಸ ವೇತನ ದರ ಪಟ್ಟಿ ಜಾರಿಗೆ ಬರಲಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಕೂಡ 2016ರಲ್ಲೇ ಒಪ್ಪಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.ಹೀಗಾಗಿ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಲು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.

ಕನಿಷ್ಟ ವೇತನ ಏರಿಕೆ ಇಲ್ಲ, ಒಟ್ಟಾರೆ ವೇತನ ಏರಿಕೆ?
ಕಳೆದ ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು. ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಮೂಲ ವೇತನದಲ್ಲಿ ಎಷ್ಟು ಪ್ರಮಾಣ ಏರಿಕೆ ಬೇಡಿಕೆ ಹಾಗೆ ಉಳಿದಿದೆ. ಆದರೆ, ಒಟ್ಟಾರೆ ವೇತನದಲ್ಲಿ 2 ಸಾವಿರ ರು ಏರಿಕೆ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ.

ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ
ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಲಭ್ಯ ಮಾಹಿತಿಯಂತೆ aykroyd ಫಾರ್ಮ್ಯೂಲಾದಂತೆ ಧೀರ್ಘಾವಧಿಗೆ ಜಾರಿಗೊಳಿಸಬಹುದು

ನಿವೃತ್ತಿ ವಯಸ್ಸು 62ಕ್ಕೇರಿಸಲು ಆಗ್ರಹ
2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ ಮುಂದುವರೆದಿದೆ

ತುಟ್ಟಿಭತ್ಯೆ ಪ್ರಮಾಣ ಏರಿಕೆಗೂ ಮನವಿ
ಕೇಂದ್ರ ಸಂಪುಟವು 3% ತುಟ್ಟಿ ಭತ್ಯೆ (ಡಿಎ) ಹೆಚ್ಚಳದ ಘೋಷಣೆ ಮಾಡಿದ್ದು, ಸರ್ಕಾರಿ ನೌಕರರಿಗೆ ಕೊಂಚ ಸಂತಸ ತಂದಿದೆ. ಜನವರಿ 1, 2019ರಿಂದಲೇ ಇದು ಪೂರ್ವಾನ್ವಯ ಆಗಲಿದೆ. ಈ ನಿರ್ಧಾರದಿಂದ ಕಳೆದ ಕೇಂದ್ರ ಸರಕಾರದ ಮೇಲೆ 9000 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬಿದ್ದಿತ್ತು. ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. 3% ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದರಿಂದ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಆದರೆ, ಶೇ 4ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ.












Click it and Unblock the Notifications