ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಬುಧವಾರ ರೈಲ್ವೆ ಉದ್ಯೋಗಿಗಳಿಗೆ ಪೊಡಕ್ಟಿವಿಟಿ ಲಿಂಕ್ಡ್ ಬೋನಸ್ (ಪಿಎಲ್ ಬಿ) ನೀಡಲು ನಿರ್ಧರಿಸಿದೆ. ದಸರಾ ಹಬ್ಬಕ್ಕೆ ಮುಂಚಿತವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಉದ್ಯೋಗಿಗಳ ಉತ್ಪಾದಕತೆ, ಕಾರ್ಯಕ್ಷಮತೆ ಹೆಚ್ಚಿಸುವ ಗುರಿಯಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದು, ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳಿಗೆ ಸಮನಾಗಿ ಪಿಎಲ್ ಬಿ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದರಿಂದ 12.30 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ದೊರೆಯಲಿದೆ. ದಸರಾಗೆ ಮುಂಚಿತವಾಗಿ ಪಾವತಿಸಲಾಗುತ್ತದೆ. ಈ ಬೋನಸ್ ಅನ್ನು ಪ್ರೋತ್ಸಾಹಧನ ಎಂಬಂತೆ ನೀಡಲಾಗುತ್ತಿದೆ. ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೋನಸ್ ನೋಡಲಾಗುತ್ತಿದೆ ಎಂದು ಕೂಡ ಹೇಳಲಾಗಿದೆ.
ಪಿಎಲ್ ಬಿ ಪಾವತಿಗೆ ತಿಂಗಳಿಗೆ 7 ಸಾವಿರ ರುಪಾಯಿ ಎಂಬ ಮಿತಿ ಹಾಕಿಕೊಳ್ಳಲಾಗಿದೆ. 78 ದಿನಗಳಿಗೆ ಗರಿಷ್ಠ ಮೊತ್ತ 17,951 ರುಪಾಯಿ ಮೀರುವುದಿಲ್ಲ. ರೈಲ್ವೆ ನೌಕರರಿಗೆ ಬೋನಸ್ ಪಾವತಿಸಲು ಕೇಂದ್ರ ಸರಕಾರ 2,245.45 ಕೋಟಿ ರುಪಾಯಿ ತೆಗೆದಿಡಬೇಕಾಗುತ್ತದೆ.
ಇನ್ನು ರೈಲ್ವೆ ಸುರಕ್ಷತೆಗೂ ಹೆಚ್ಚಿನ ಗಮನ ನೀಡುತ್ತಿರುವ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹನಿ, ಮುಂಬರುವ ತಿಂಗಳುಗಳಲ್ಲಿ ಹೊಸ ಹಳಿಗಳ ಜೋಡಣೆ, ನಿರ್ವಹಣೆ ಮತ್ತು ದುರಸ್ತಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.












Click it and Unblock the Notifications