ಶ್ರೀಸಾಮಾನ್ಯರ ಜೇಬು ತುಂಬುವ ಆರು ಪ್ರಸ್ತಾವನೆ
ಬೆಂಗಳೂರು, ಜು. 10 : ಪ್ರಸ್ತುತ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಸಾಮಾನ್ಯ ಎದುರಿಸುತ್ತಿರುವ ಬೆಲೆ ಏರಿಕೆಯ ಗುಮ್ಮನನ್ನು ಸುಮ್ಮನಾಗಿಸುವ ಉದ್ದೇಶದಿಂದ ಕೇಂದ್ರ ವಿತ್ತ ಸಚಿವ 2014-15ನೇ ಸಾಲಿನ ಆಯವ್ಯಯದಲ್ಲಿ ಮಾಡಿರುವ ಈ ಆರು ಪ್ರಸ್ತಾವನೆಗಳು ಸ್ವಾಗತಾರ್ಹವಾಗಿವೆ.
ಈ ಆರು ಪ್ರಸ್ತಾವನೆಗಳು ಸ್ವಲ್ಪ ಮಟ್ಟಿಗೆ ಶ್ರೀಸಾಮಾನ್ಯನ ಚಡ್ಡಿಗೆ ಬಿದ್ದಿರುವ ತೂತಿಗೆ ಹೊಲಿಗೆ ಹಾಕುವುದಲ್ಲದೆ, ತೆರಿಗೆ ಉಳಿಸಿ ಸ್ವಲ್ಪ ಮಟ್ಟಿಗೆ ಶ್ರೀಮಂತರನ್ನಾಗಿ ಮಾಡಲಿವೆ. ಜೊತೆಗೆ ಹಲವಾರು ಯೋಜನೆಗಳಲ್ಲಿ ಹಣ ಹೂಡಿಕೆಯನ್ನು ಕೂಡ ಈ ಯೋಜನೆಗಳು ಉತ್ತೇಜನ ನೀಡಲಿವೆ.
ತರಕಾರಿ, ಆಹಾರಧಾನ್ಯ, ರೈಲು ಬಸ್ಸು ಪ್ರವಾಸ, ಪೆಟ್ರೋಲ್ ಡೀಸೆಲ್ ಪ್ರತಿಯೊಂದೂ ತುಟ್ಟಿಯಾಗಿರುವಾಗ ಸ್ವಲ್ಪ ಹಣ ಉಳಿತಾಯವಾದರೆ ಯಾರು ಖುಷಿಪಡಲ್ಲ ಹೇಳಿ? ಈ ಆರು ಪ್ರಸ್ತಾವನೆಗಳು ಯಾವುದು ಎಂಬುದನ್ನು ಒಂದೊಂದಾಗಿ ನೋಡೋಣ ಬನ್ನಿ. [ಕೇಂದ್ರ ಬಜೆಟ್ ಮುಖ್ಯಾಂಶಗಳು]

ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ
ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ನಿಂದ 2.5 ಲಕ್ಷ ರು.ವರೆಗೆ ಏರಿಸಲಾಗಿದೆ. ಅಂದರೆ, 2.5 ಲಕ್ಷ ರು.ವರೆಗೆ ಆದಾಯ ಪಡೆಯುವವರು ತೆರಿಗೆ ಕಟ್ಟಬೇಕಾಗಿಲ್ಲ. ಇದು ಕೆಳಮಧ್ಯಮ ವರ್ಗದ ನೌಕರರಿಗೆ ವರದಾನವಾಗಲಿದೆ. ಇದರಿಂದ 5 ಸಾವಿರ ರು.ಯಷ್ಟು ತೆರಿಗೆ ಹಣ ಉಳಿಯಲಿದೆ.

80ಸಿ ಸೆಕ್ಷನ್ ಅಡಿ ಹೂಡಿಕೆಯ ಲಾಭ
ಆದಾಯ ತೆರಿಗೆ ಕಾಯ್ದೆಯ 80ಸಿ ನಿಯಮದ ಅಡಿ ಹೂಡಿಕೆ ಮಿತಿಯನ್ನು 1 ಲಕ್ಷ ರು.ನಿಂದ 1.5 ಲಕ್ಷ ರು.ಗೆ ಏರಿಸಲಾಗಿದೆ. ತೆರಿಗೆ ಕಟ್ಟುವವರು ಇನ್ನು ಮುಂದೆ ಎಲ್ಐಸಿ, ಪಿಪಿಎಫ್, ಇಪಿಎಫ್, ಎನ್ಎಸ್ಸಿ ಮುಂತಾದವುಗಳಲ್ಲಿ ಇನ್ನೂ 50 ಸಾವಿರ ರು.ನಷ್ಟು ಹೆಚ್ಚಿಗೆ ಹೂಡಬಹುದಾಗಿದೆ.

ಮನೆ ಸಾಲ ಮೇಲಿನ ಬಡ್ಡಿ ಮಿತಿ ಏರಿಕೆ
ದೊಡ್ಡ ಪ್ರಮಾಣದಲ್ಲಿ ಮನೆ ಸಾಲ ಮಾಡಿದವರು ಸ್ವಲ್ಪ ಮಟ್ಟಿಗೆ ನಿರಾಳರಾಗಬಹುದು. ಮನೆ ಸಾಲದ ಮೇಲಿನ ಬಡ್ಡಿಯ ಮಿತಿಯನ್ನು 1.5 ಲಕ್ಷ ರು.ನಿಂದ 2 ಲಕ್ಷ ರು.ವರೆಗೆ ಏರಿಸಲಾಗಿದೆ. ಅಂದರೆ, 2 ಲಕ್ಷ ರು.ವರೆಗೆ ಕಟ್ಟಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸಿಗಲಿದೆ. ಇದರಿಂದಾಗಿ 5 ಸಾವಿರ ರು.ಯಷ್ಟು ಉಳಿತಾಯವಾಗಲಿದೆ.

ಪಿಂಚಣಿದಾರರಿಗೆ ಸಂತಸದ ಸುದ್ದಿ
ಸಂಘಟಿತ ವಲಯದ ನೌಕರರಿಗೆ ಕನಿಷ್ಠ 1 ಸಾವಿರ ರು. ಪಿಂಚಣಿ ಸಿಗಬೇಕೆಂದು ಆಯವ್ಯಯದಲ್ಲಿ ಪ್ರಸ್ತಾವನೆ ಮಾಡಲಾಗಿದೆ. ಇದರಿಂದ 2 ಕೋಟಿ 80 ಲಕ್ಷ ಪಿಂಚಣಿದಾರರಿಗೆ ಕನಿಷ್ಠ ಸಾವಿರ ರು.ಗಿಂತ ಹೆಚ್ಚು ಪಿಂಚಣಿ ಸಿಗಲಿದೆ. ಈಗ ಸಾವಿರ ರು.ಗಿಂತ ಕಡಿಮೆ ಪಿಂಚಣಿ ಸಿಗುತ್ತಿದೆ.

ಎನ್ಎಸ್ಸಿಗೆ ವಿಮೆಯ ಕವರೇಜ್
ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ ಮಾಡಿದವರಿಗೆ ಇಲ್ಲಿಯವರೆಗೆ ತೆರಿಗೆ ಉಳಿತಾಯದ ಲಾಭ ಮಾತ್ರ ಸಿಗುತ್ತಿತ್ತು. ಈಗ ರಾಷ್ಟ್ರೀಯ ಉಳಿತಾಯ ಪತ್ರಗಳಿಗೆ ವಿಮೆಯ ಕವರೇಜ್ ಕೂಡ ಸಿಗಲಿದೆ.

ಪಿಪಿಎಫ್ ಹೂಡಿಕೆ ಮಿತಿ ಏರಿಕೆ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ವಾರ್ಷಿಕವಾಗಿ 1.5 ಲಕ್ಷ ರು.ವರೆಗೆ ಹೂಡಿಕೆ ಮಾಡಬಹುದು. ಮೊದಲು ಹೂಡಿಕೆಯ ಮಿತಿ 1 ಲಕ್ಷ ರು. ಮಾತ್ರವಿತ್ತು. ಸೆಕ್ಷನ್ 80ಸಿ ಅಡಿಯಲ್ಲಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದವರಿಗೆ ತೆರಿಗೆ ಉಳಿತಾಯದ ಲಾಭ ಮಾತ್ರವಲ್ಲ, ಅದರ ಮೇಲೆ ಸಿಗುವ ಬಡ್ಡಿಗೂ ತೆರಿಗೆ ವಿನಾಯಿತಿ ಸಿಗಲಿದೆ.












Click it and Unblock the Notifications