National Highway: ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿಗಳ ಹಂತದಲ್ಲಿವೆ. ಈ ಸಾಲಿಗೆ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ NH ಕೂಡ ಸೇರಿದೆ. ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766Cಯಡಿ ಬರುವ ಬೈಂದೂರು- ಕೊಲ್ಲೂರು ನಡುವಿನ 38 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ ಪಡೆದಿದೆ. ಹಾಗಾದ್ರೆ, ಇದೀಗ ಇದು ಎಲ್ಲಿಗೆ ಬಂದು ನಂತಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನದಿಂದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಯೋಜನೆಗಾಗಿ 394.95 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಕೊಲ್ಲೂರಿನ ಮಾಸ್ತಿಕಟ್ಟೆಯಿಂದ ದಳಿವರೆಗಿನ 2.7 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಗೆ ಈಗ ವೇಗ ನೀಡಲಾಗಿದೆ.

ಏನೆಲ್ಲಾ ಪ್ರಯೋಜನಗಳಿವೆ?
ಈ ಹೆದ್ದಾರಿ ಅಭಿವೃದ್ಧಿಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಪ್ರಯಾಣ ಸುಗಮವಾಗಲಿದೆ. ಜೊತೆಗೆ ಕರಾವಳಿ ಕರ್ನಾಟಕವನ್ನು ಮಧ್ಯ ಕರ್ನಾಟಕದೊಂದಿಗೆ ಜೋಡಿಸುವ ಉದ್ದೇಶದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾಲು.. ಸಾಲು ಸವಾಲುಗಳು
ರಾಣೆಬೆನ್ನೂರು-ಬೈಂದೂರು ಹೆದ್ದಾರಿ 766ಸಿ ವಿಸ್ತರಣೆಗೆ 2,214 ಮರಗಳನ್ನು ಕಡಿಯಲು ಗುರುತಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಬೈಂದೂರು ನಡುವಿನ ತಗ್ಗರ್ಸೆ, ಯಳಜಿತ, ಗೋಳಿಹೊಳೆ ಮತ್ತು ಜಡ್ಕಲ್ ಗ್ರಾಮಗಳ ಮೂಲಕ ಈ ಹೆದ್ದಾರಿ ಹಾದುಹೋಗಲಿದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಮರಗಳ ನಾಶಕ್ಕೆ ಪರಿಸರ ಸಂರಕ್ಷಣೆ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 'ಗ್ರೀನ್ ಲೈವ್ಸ್ ಶಿವಮೊಗ್ಗ ಟ್ರಸ್ಟ್' ಈ ಕುರಿತು ಆಕ್ಷೇಪ ಸಲ್ಲಿದೆ, ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2015ರ ಹಸಿರು ಹೆದ್ದಾರಿ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಒತ್ತಾಯಿಸಿದೆ.
"ಬೈಂದೂರು-ಕೊಲ್ಲೂರು ನಡುವಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮರ ಕಟಾವಿಗೆ ಸಂಬಂಧಿಸಿದಂತೆ ಇರುವ ಆಕ್ಷೇಪಗಳನ್ನು ಕಾನೂನುಬದ್ಧವಾಗಿ ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಲಾಗಿದೆ," ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.
ಇನ್ನೂ ಇಲ್ಲಿನ ನಿವಾಸಿಗಳು, ಈಗಾಗಲೇ ಮುಗಿದಿರುವ ಕೆಲವು ಭಾಗದ ರಸ್ತೆ ಅಗಲೀಕರಣ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಆದರೆ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಉತ್ತಮವಾಗಿದೆ. ಈ ರಸ್ತೆ ಬೇಗ ಪೂರ್ಣಗೊಂಡರೆ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬೈಂದೂರು-ಕೊಲ್ಲೂರು ಹೆದ್ದಾರಿ ಅಭಿವೃದ್ಧಿಯು ಕರಾವಳಿ ಮತ್ತು ಮಲೆನಾಡು ಭಾಗದ ಜನರ ದಶಕಗಳ ಕನಸಾಗಿದೆ. ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಿ, ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಿದರೆ ಮಾತ್ರ ಈ ಯೋಜನೆ ಸಾರ್ಥಕವಾಗಲಿದೆ. ಅಭಿವೃದ್ಧಿಯ ಜೊತೆಗೆ ಪ್ರಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಲಾಖೆಯ ಮೇಲಿದೆ.
ಯಾವೆಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗಿದೆ?
* ಉಡುಪಿ
* ಶಿವಮೊಗ್ಗ
* ಹಾವೇರಿ
ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ (NH 766C) ಪ್ರಮುಖವಾಗಿ ಕರ್ನಾಟಕದ ಮೂರು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಕರಾವಳಿಯ ಉಡುಪಿ, ಮಲೆನಾಡಿನ ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕ ಭಾಗದ ಹಾವೇರಿ ಜಿಲ್ಲೆ ಮೇಲೆ ಹಾದುಹೋಗಲಿದೆ.
ಈ ಹೆದ್ದಾರಿಯು ಬೈಂದೂರಿನಿಂದ ಆರಂಭವಾಗಲಿದ್ದು, ಅಲ್ಲಿಂದ ಕೊಲ್ಲೂರು ತಲುಪುವವರೆಗಿನ ಸಂಪೂರ್ಣ 38 ಕಿ.ಮೀ. ಭಾಗವು ಉಡುಪಿ ಜಿಲ್ಲೆಯ (ಮುಖ್ಯವಾಗಿ ಬೈಂದೂರು ಮತ್ತು ಕುಂದಾಪುರ ತಾಲೂಕುಗಳು) ವ್ಯಾಪ್ತಿಯಲ್ಲೇ ಬರುತ್ತದೆ. ಕೊಲ್ಲೂರಿನಿಂದ ಮುಂದೆ ಸಾಗುವ ಈ ರಸ್ತೆಯು ಮಲೆನಾಡು ಭಾಗದ ಹೊಸನಗರ ಮತ್ತು ಸಾಗರ ತಾಲೂಕುಗಳ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಇದು ಅಂತಿಮವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರನ್ನು ತಲುಪಿ ಅಲ್ಲಿ ಕೊನೆಗೊಳ್ಳುತ್ತದೆ.












Click it and Unblock the Notifications