Kolkata: ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜಿನ 10 ವೈದ್ಯರು ಸೇರಿದಂತೆ 59 ಸಿಬ್ಬಂದಿ ಅಮಾನತು!
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇನ್ನೂ ಕೂಡ ಮಾಸಿಲ್ಲ. ಈ ಬಗ್ಗೆ ತನಿಖೆ ಇನ್ನೂ ಕೂಡ ನಡೆಯುತ್ತಲೇ ಇದೆ. ಈ ನಡುವೆ ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜಿನ 10 ವೈದ್ಯರು ಸೇರಿದಂತೆ 59 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಹೌದು... ರ‍್ಯಾಗಿಂಗ್ ಸಂಸ್ಕೃತಿ ಮತ್ತು ಅಕ್ರಮ ಹಣ ವರ್ಗಾವಣೆಯನ್ನು ತನಿಖೆ ಮಾಡುವ ಸಮಿತಿಯು ಭಾನುವಾರ ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹತ್ವದ ಕ್ರಮ ಕೈಗೊಂಡಿದೆ. ಸಮಿತಿಯು 10 ವೈದ್ಯರು ಸೇರಿದಂತೆ 59 ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಮಾಹಿತಿಯ ಪ್ರಕಾರ ಇವರಲ್ಲಿ ವೈದ್ಯರು, ಇಂಟರ್ನಿಗಳು, ವಿದ್ಯಾರ್ಥಿಗಳು ಮತ್ತು ಗೃಹ ಸಿಬ್ಬಂದಿ ಸೇರಿದ್ದಾರೆ. ಇವರ ಮೇಲೆ ರ‍್ಯಾಗಿಂಗ್ ಸೇರಿದಂತೆ ಹಲವು ಆರೋಪಗಳಿವೆ. ಆರ್ಜಿ ಕರ್ ಆಸ್ಪತ್ರೆ ಆಡಳಿತವು ಎಲ್ಲಾ ಆರೋಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಲ್ಲದೆ ಕಿರಿಯರಿಗೆ ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸಿದ ಆರೋಪವೂ ಇವರ ಮೇಲೆ ಹೊರಿಸಲಾಗಿದೆ. ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆಯ ಘಟನೆಯ ನಂತರ, ಕ್ಯಾಂಪಸ್‌ನಲ್ಲಿ ಬೆದರಿಕೆ ಸಂಸ್ಕೃತಿಯನ್ನು ನಿಯಂತ್ರಿಸಲು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಯಿತು.
ಅಮಾನತು ಆದೇಶ ಹೊರಡಿಸುವ ಮುನ್ನ ತನಿಖಾ ಸಮಿತಿ ಸಭೆ ನಡೆಸಿತ್ತು. ಇದು ಅಧಿಕಾರಿಗಳು, ವೈದ್ಯರು ಮತ್ತು ಇಂಟರ್ನಿಗಳ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಸಭೆ ನಡೆಯುತ್ತಿರುವಾಗಲೇ ವೈದ್ಯಕೀಯ ವಿದ್ಯಾರ್ಥಿಗಳು ಹೊರಗೆ ಘೋಷಣೆ ಕೂಗಿದ್ದಾರೆ. ಸಭೆ ಬಳಿಕ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಸಂಸ್ಕೃತಿ ಆರೋಪದ ಮೇಲೆ 59 ಜನರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ತಕ್ಷಣದಿಂದ ಜಾರಿಗೆ ಬರುವಂತೆ ಹತ್ತು ವೈದ್ಯರನ್ನು ಅಮಾನತು ಮಾಡಲಾಗಿದೆ. ಇತರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಹಾಸ್ಟೆಲ್ ಖಾಲಿ ಮಾಡಲು ಆದೇಶ
ಉಚ್ಛಾಟಿತ ವೈದ್ಯರಲ್ಲಿ ಸೌರಭ್ ಪಾಲ್, ಆಶಿಶ್ ಪಾಂಡೆ (ಇವರನ್ನು ಸಿಬಿಐ ಬಂಧಿಸಿದೆ), ಅಭಿಷೇಕ್ ಸೇನ್, ಆಯುಷಿ ಥಾಪಾ, ನಿರಂಜನ್ ಬಾಗ್ಚಿ, ಷರೀಫ್ ಹಸನ್, ನೀಲಾಗ್ನಿ ದೇಬನಾಥ್, ಅಮರೇಂದ್ರ ಸಿಂಗ್, ಸತ್ಪಾಲ್ ಸಿಂಗ್ ಮತ್ತು ತನ್ವೀರ್ ಅಹ್ಮದ್ ಖಾಜಿ ಸೇರಿದ್ದಾರೆ. ಇವರಿಗೆ ಮುಂದಿನ 72 ಗಂಟೆಗಳಲ್ಲಿ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶಿಸಲಾಗಿದೆ. ಈ ಆರೋಪಿಗಳ ಹೆಸರನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ಕಳುಹಿಸಲಾಗುವುದು, ಇದರಿಂದಾಗಿ ಅವರ ನೋಂದಣಿಯನ್ನು ತನಿಖೆ ಮತ್ತು ರದ್ದುಗೊಳಿಸುವ ಪ್ರಕ್ರಿಯೆಯು ಪ್ರಾರಂಭಿಸಬಹುದು.












Click it and Unblock the Notifications