ಪಾಕಿಸ್ತಾನದ ಜೈಲಿನಲ್ಲಿ ನರಳುತ್ತಿರುವ ಗುಜರಾತಿನ 560 ಮೀನುಗಾರರು: ಇಲ್ಲಿದೆ ಬೆಚ್ಚಿಬೀಳಿಸುವ ಅಂಕಿಅಂಶ, ವರದಿ, ವಿವರ
ಭಾರತದ ಗುಜರಾತಿನ 560 ಮೀನುಗಾರರು ಪಾಕಿಸ್ತಾನದ ಜೈಲಿನಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಅಂಕಿಅಂಶ, ವರದಿ, ವಿವರ ತಿಳಿಯಿರಿ
ಅಹಮದಾಬಾದ್, ಮಾರ್ಚ್ 08: ಭಾರತದ ಗುಜರಾತಿನ 560 ಮೀನುಗಾರರು ಪಾಕಿಸ್ತಾನದ ಜೈಲಿನಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ಪಾಕಿಸ್ತಾನದ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಅವರನ್ನು ಜೈಲಿನಲ್ಲಿ ಇರಿಸಿರುವ ಕಾರಣ, ಮೀನುಗಾರರ ಜೀವನ ದುಸ್ಥರವಾಗಿದೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ.
ಈ ಸ್ಪೋಟಕ ವಿಚಾರವನ್ನು ಮಂಗಳವಾರ ವಿಧಾನಸಭೆಗೆ ತಿಳಿಸಿದ ಗುಜರಾತ್ ಸರ್ಕಾರ, ರಾಜ್ಯದ 560 ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿ ನರಳುತ್ತಿದ್ದಾರೆ ಎಂದು ಹೇಳಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಅರ್ಜುನ್ ಮೊದ್ವಾಡಿಯಾ ಈ ಕುರಿತು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗುಜರಾತ್ ಮೀನುಗಾರಿಕೆ ಸಚಿವ ರಾಘವ್ಜಿ ಪಟೇಲ್ ಅವರು, ಡಿಸೆಂಬರ್ 31, 2022 ರ ವೇಳೆಗೆ ಒಟ್ಟು 560 ಗುಜರಾತ್ ಮೀನುಗಾರರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
'ನಮ್ಮ ಮೀನುಗಾರರು ಕೆಲವೊಮ್ಮೆ ಅಂತರಾಷ್ಟ್ರೀಯ ಕಡಲ ಗಡಿಯನ್ನು ದಾಟುತ್ತಾರೆ. ಪಾಕಿಸ್ತಾನವು ಕೆಲವೊಮ್ಮೆ ಅವರನ್ನು ಗಡಿಯಿಂದ ಅಪಹರಿಸುತ್ತದೆ. ಕೇವಲ ಎರಡು ವರ್ಷಗಳಲ್ಲಿ 560 ಮೀನುಗಾರರ ಪೈಕಿ 274 ಮಂದಿಯನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದಾರೆ. 274ರಲ್ಲಿ 193 ಮಂದಿಯನ್ನು 2021ರಲ್ಲಿ ಮತ್ತು 81 ಮಂದಿಯನ್ನು 2022ರಲ್ಲಿ ಜೈಲಿಗೆ ಹಾಕಲಾಗಿದೆ. ಪಾಕಿಸ್ತಾನವು ಸರಿಸುಮಾರು 1,200 ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ' ಎಂದು ರಾಘವ್ಜಿ ಪಟೇಲ್ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾದ ಗುಜರಾತ್ ಮೀನುಗಾರರ ಸಂಖ್ಯೆ 55 ರಷ್ಟಿದ್ದು, 2021 ರಲ್ಲಿ 20 ಮತ್ತು 2022 ರಲ್ಲಿ 35 ಬಿಡುಗಡೆಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಜೈಲಿನಲ್ಲಿರುವ ಮೀನುಗಾರರ ಕುಟುಂಬಗಳಿಗೆ ಈ ಹಿಂದೆ ದಿನಭತ್ಯೆಯಾಗಿ 50 ರೂ.ಗಳನ್ನು ನೀಡಲಾಗುತ್ತಿತ್ತು. 2012ರಲ್ಲಿ ಈ ನೆರವನ್ನು 150 ರೂ.ಗೆ ಹೆಚ್ಚಿಸಲಾಗಿದೆ. 2019ರಿಂದ ಈ ನೆರವು 300 ರೂ.ಗೆ ಏರಿಕೆಯಾಗಿದೆ' ಎಂದು ಹೇಳಿದರು.
'2021 ರಲ್ಲಿ 323 ಜೈಲಿನಲ್ಲಿರುವ ಮೀನುಗಾರರ ಕುಟುಂಬಗಳಿಗೆ 300 ರೂ ಗಳಷ್ಟು ದೈನಂದಿನ ಭತ್ಯೆಯಾಗಿ ನೀಡಲಾಗಿದೆ. 2022 ರಲ್ಲಿ 428 ಕುಟುಂಬಗಳಿಗೆ ದೈನಂದಿನ ಭತ್ಯೆ ನೀಡಲಾಗಿದೆ. ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರ್ಕಾರವು 4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುತ್ತದೆ' ಎಂದು ಅವರು ಹೇಳಿದರು.
ಮೀನುಗಾರಿಕಾ ದೋಣಿ ಮಾಲೀಕರಿಗೆ ಅವರ ದೋಣಿಗಳಲ್ಲಿ ಜಿಪಿಎಸ್ ಸಾಧನಗಳನ್ನು ಅಳವಡಿಸಲು ರಾಜ್ಯ ಸರ್ಕಾರವು ಸಹಾಯ ಮಾಡಿದೆ. ಇದಕ್ಕಾಗಿ 20,000 ರೂ.ಗಳನ್ನು ನೀಡಿದೆ ಎಂದು ಪಟೇಲ್ ಸದನಕ್ಕೆ ತಿಳಿಸಿದರು. ಆದರೆ, ಕಾನ್ಸುಲರ್ ಪ್ರವೇಶದ ಕೊರತೆಯಿಂದಾಗಿ ಅವರ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಮೊದ್ವಾಡಿಯಾ ಹೇಳಿದ್ದಾರೆ.












Click it and Unblock the Notifications