Gold: ಕಾಡಿನಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿತ್ತು 52 ಕೆ.ಜಿ ಚಿನ್ನ, ₹9.8 ಕೋಟಿ ಹಣ!
ದುಡ್ಡಿಲ್ಲದವರಿಗೆ ದುಡ್ಡು ಮಾಡುವುದು ಹೇಗೆ ಎನ್ನುವ ಚಿಂತೆಯಾದರೆ, ದುಡ್ಡಿದ್ದವರಿಗೆ ಅದನ್ನು ಕಾಪಾಡಿಕೊಳ್ಳುವುದು ಮತ್ತೊಂದು ಚಿಂತೆ. ಐಟಿ, ಇಡಿ ದಾಳಿಯಾದರೆ ಎನ್ನುವ ಭಯದಿಂದ ಹಣವನ್ನು ಬಚ್ಚಿಡುವುದು, ದಾಳಿಯ ಸಂದರ್ಭದಲ್ಲಿ ಮನೆಯಿಂದ ಹೊರಗೆ ಎಸೆದಿರುವ ಹಲವು ಘಟನೆಗಳನ್ನು ನೋಡಿದ್ದೇವೆ. ಆದರೆ ಕಾಡೊಂದರಲ್ಲಿ ಅನಾಥವಾಗಿ ನಿಂತಿದ್ದ ಕಾರಿನಲ್ಲಿ ಬರೋಬ್ಬರಿ 52 ಕೆಜಿ ಚಿನ್ನ, 9.8 ಕೋಟಿ ರೂಪಾಯಿ ಹಣ ಸಿಕ್ಕಿದ್ದು ಐಟಿ ಇಲಾಖೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಸಮೀಪದ ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ನಿಂತಿದ್ದ ಇನ್ನೋವಾ ಕಾರಿನಲ್ಲಿ 52 ಕೆಜಿ ಚಿನ್ನ ಮತ್ತು 9.86 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅರಣ್ಯ ಪ್ರದೇಶದ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಕಾರು ನೋಡಿ ಯಾರೋ ಕರೆ ಮಾಡಿ ಭೋಪಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಬ್ಯಾಗ್‌ಗಳು ಇರುವುದು ಆತಂಕಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಹಣ, ಚಿನ್ನ ಪತ್ತೆಯಾಗುತ್ತಿದ್ದಂತೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಐಟಿ ದಾಳಿ ಭಯದಿಂದ ಬಿಟ್ಟು ಹೋದ್ರಾ?
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, "ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಅನಾಥವಾಗಿ ನಿಂತಿದ್ದ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನ ಬಗ್ಗೆ ರಾಟಿಬಾದ್ ಪೊಲೀಸ್ ಠಾಣೆಗೆ ಯಾರೋ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊರಗಿನಿಂದಲೇ ಕಾರಿನಲ್ಲಿ ಹಲವು ಚೀಲಗಳಿಗೆ ಎನ್ನುವುದು ಕಾಣಿಸಿತ್ತು. ಪೊಲೀಸ್ ಸಿಬ್ಬಂದಿ ಕಾರನ್ನು ಪರಿಶೀಲನೆ ಮಾಡಿದಾಗ ಕಾರು ಲಾಕ್ ಆಗಿರುವುದು ಕಂಡು ಬಂದಿತ್ತು. ಐಟಿ, ಇಡಿ ದಾಳಿಯ ಭಯದಿಂದ ಯಾರೋ ಹೀಗೆ ತಂದು ಬಿಟ್ಟುಹೋಗಿರಬಹುದು ಎನ್ನುವ ಅನುಮಾನವಿದೆ" ಎಂದು ಹೇಳಿದ್ದಾರೆ.
ಪೊಲೀಸರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಔಪಚಾರಿಕ ತಪಾಸಣೆ ನಡೆಸಿದ್ದು, ಬಳಿಕ ಕಾರಿನ ಬಾಗಿಲು ತೆರೆದು ಪರಿಶೀಲನೆ ಮಾಡಿದಾಗ ಒಳಗಿದ್ದ 7-8 ಚೀಲಗಳಲ್ಲಿ ಚಿನ್ನದ ಗಟ್ಟಿಗಳು ಮತ್ತು ಹಣ ಪತ್ತೆಯಾಗಿದೆ. ಒಟ್ಟು 52 ಕೆಜಿ ಚಿನ್ನದ ಗಟ್ಟಿಗಳು ಮತ್ತು 9.86 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ವಾಹನದ ಚಾಲಕನನ್ನು ಗುರುತಿಸಿದ್ದು, ಐಟಿ ಇಲಾಖೆ ಹಣದ ಮೂಲವನ್ನು ಪತ್ತೆ ಮಾಡಲು ತನಿಖೆ ಮಾಡುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ), ಲೋಕಾಯುಕ್ತ ಮತ್ತು ಐಟಿ ಇಲಾಖೆಗಳಿ ರಿಯಲ್ ಎಸ್ಟೇಟ್ ವ್ಯವಹಾರಘಲ ಮೇಲೆ ದಾಳಿ ಮಾಡುತ್ತಿದ್ದು ಅದರಿಂದ ತಪ್ಪಿಸಿಕೊಳ್ಳಲು ಯಾರೋ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಗುರುವಾರ ಸಾರಿಗೆ ಕಚೇರಿಯ ಮಾಜಿ ಕಾನ್‌ಸ್ಟೇಬಲ್ ಒಬ್ಬರ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಇಲಾಖೆ ಅಧಿಕಾರಿಗಳು 1 ಕೋಟಿ ರೂಪಾಯಿ ನಗದು ಮತ್ತು 40 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದರು.












Click it and Unblock the Notifications