ಸೋನಿಯಾ, ಮೋದಿ ಭೇಟಿ ಮುನ್ನ ಭಾರಿ ಬಾಂಬ್ ಪತ್ತೆ

ರಾಜ್ಯ ವಿಧಾನಸಭೆ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಇವರಿಬ್ಬರೂ ಬಸ್ತಾರ್ ಗೆ ಭೇಟಿ ನೀಡುವ ಮುನ್ನ ಕೆಲವೇ ಗಂಟೆಗಳ ಮುನ್ನ ಭದ್ರತಾ ಪಡೆಗಳು ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ಸಾಮಗ್ರಿಯನ್ನು ಪತ್ತೆಹಚ್ಚಿದ್ದಾರೆ.
ಮೋದಿಗೆ ಜೀವ ಬೆದರಿಕೆ ಬಗ್ಗೆ ಆತಂಕ ವ್ಯಕ್ತವಾಗಿರುವ ಬೆನ್ನಿಗೇ ರಾಜ್ಯದ ಬಸ್ತಾರಿನ ದಂತೇವಾಡದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದು ಭಾರಿ ಆತಂಕ ಸೃಷ್ಟಿಸಿದೆ. ನ. 17ರಂದು ಬೆಂಗಳೂರಿನಲ್ಲೂ ಮೋದಿ ಸಮಾವೇಶ ಆಯೋಜಿಸಿರುವುದರಿಂದ ತಕ್ಷಣೇ ಮೋದಿ ಸುರಕ್ಷತೆ ಬಗ್ಗೆ ಕೇಂಧ್ರ ಸರಕಾರ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಇಂದು ಗುರುವಾರ ಮೋದಿ ಮತ್ತು ಸೋನಿಯಾ ಅವರಿಬ್ಬರೂ ಬಸ್ತಾರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಆದರೆ ಅದಕ್ಕೂ ಮುನ್ನ ಭದ್ರತಾ ಪಡೆಗಳು ಇಲ್ಲಿ ಜನನಿಬಿಡ ಪ್ರದೇಶದಲ್ಲಿ ಪತ್ತೆಯಾದ 50 ಕೆಜಿ ತೂಕದ 2 IED ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿವೆ.
CRPF ಮತ್ತು ರಾಜ್ಯ ಪೊಲೀಸ್ ಜಂಟಿ ತಂಡಗಳು ಸುಖ್ಮಾ ಜಿಲ್ಲೆಯ ಚಿಂತಲನಾರ್ ಪಟ್ಟಣದಲ್ಲಿ ರಸ್ತೆ ಬದಿ ಸ್ಟೀಲ್ ಡಬ್ಬದಲ್ಲಿಟ್ಟಿದ್ದ ತಲಾ 25 ಕೆಜಿ ತೂಕದ ಎರಡು IED ಸ್ಫೋಟಕಗಳನ್ನು ಸಕಾಲದಲ್ಲಿ ಪತ್ತೆಹಚ್ಚಿದ್ದಾರೆ.
ಇಬ್ಬರು VVIPಗಳ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಮುನ್ನೆಚ್ಚರಿಕೆಯಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಈ ಸ್ಫೋಟಕಗಳ ಬಗ್ಗೆ ಸುಳಿವು ಸಿಕ್ಕಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನವೆಂಬರ್ 9-10 ರಂದು ನಕ್ಸಲರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಮಾಹಿತಿ ನೀಡಿದೆ.
ಬಸ್ತಾರಿನ ಅಬುಜಮಾದ್ ಬೆಟ್ಟ ಪ್ರದೇಶದಲ್ಲಿ ಮಾವೋ ಉಗ್ರ ಸಂಘಟನೆಯ ಮುಖ್ಯಸ್ಥ ಗಣಪಟ್ಟಿ ಸಹ ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ. 2010ರಲ್ಲಿ ಮಾವೋ ಉಗ್ರರು ಅತಿ ಭಯಾನಕ ದಾಳಿಯನ್ನು ನಡೆಸಿದ್ದು ಈ ಪ್ರದೇಶದಲ್ಲಿಯೇ.
ಪ್ರಧಾನಿ ಮನಮೋಹನ್ ಸಿಂಗ್ (ನವೆಂಬರ್ 9 ರಂದು), ಕಾಂಗ್ರೆಸ್ ಉಪಾಧ್ಯಕ್ಷೆ ರಾಹುಲ್ ಗಾಂಧಿ (ನವೆಂಬರ್ 8 ರಂದು) ಅವರು ಛತ್ತೀಸ್ ಗಢ ಚುನಾವಣೆ ಸಂಬಂಧ ಈ ಪ್ರದೇಶದಕ್ಕೆ ಸದ್ಯದಲ್ಲೇ ಭೇಟಿ ನೀಡಲಿದ್ದಾರೆ.












Click it and Unblock the Notifications