Baba Siddique: ಬಾಬಾ ಸಿದ್ದಿಕಿ ಕೊಲ್ಲಲು ತಲಾ 50,000 ರೂ. ಕಾಂಟ್ರ್ಯಾಕ್ಟ್: ಹಂತಕರಿಗೆ ಬಿಷ್ಣೋಯ್ ಗ್ಯಾಂಗ್ ಸಂಪರ್ಕ!
ಮುಂಬೈ ಅಕ್ಟೋಬರ್ 13: ಬಾಬಾ ಸಿದ್ದಿಕಿ ಹತ್ಯೆಯ ನಂತರ ಒಂದರ ಹಿಂದೆ ಒಂದರಂತೆ ಹಲವು ಹೊಸ ಸಂಗತಿಗಳು ಹೊರ ಬರುತ್ತಿವೆ. ಈ ಕೊಲೆಯ ಸಂಪೂರ್ಣ ಶಂಕೆಯು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಡೆಗೆ ತೋರಿಸುತ್ತಿದೆ. ಮುಂಬೈ ಪೊಲೀಸರು ಕೂಡ ಇದನ್ನು ಖಚಿತಪಡಿಸಿದ್ದಾರೆ. ಈ ನಡುವೆ ಬಾಬಾ ಸಿದ್ದಿಕಿಯ ಶೂಟರ್‌ಗಳು ಬಿಷ್ಣೋಯ್ ಗ್ಯಾಂಗ್ ಸೇರಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ, 4 ಶೂಟರ್‌ಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶೂಟರ್‌ಗಳು ಮುಂಬೈನಲ್ಲಿದ್ದರು.
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ಆದರೆ ಈ ಕೊಲೆಯನ್ನು ಮೂರಲ್ಲ ನಾಲ್ಕು ಜನ ಸೇರಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಹಾಗಾದರೆ ಆ ನಾಲ್ಕನೇ ವ್ಯಕ್ತಿ ಯಾರು? ಇದು ಇನ್ನೂ ಬಹಿರಂಗಗೊಂಡಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಮೂವರು ಆರೋಪಿಗಳು ಈ ವರ್ಷ ಸೆಪ್ಟೆಂಬರ್ 2 ರಿಂದ ಕುರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಮನೆಯ ಬಾಡಿಗೆ ತಿಂಗಳಿಗೆ 14,000 ರೂ. ಎಮದು ತಿಳಿದು ಬಂದಿದೆ.

ಬಾಬಾ ಸಿದ್ದಿಕಿ ಅವರನ್ನು ಕೊಲ್ಲಲು 2.5 ರಿಂದ 3 ಲಕ್ಷ ರೂ. ಸುಫಾರಿ ನೀಡಲಾಗಿತ್ತು. ಕೊಲೆಗೆ ನಾಲ್ವರನ್ನು ನೇಮಿಸಲಾಗಿದ್ದು ತಲಾ 50,000 ರೂ.ಗಳಂತೆ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ಹೇಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಈ ಹಿಂದೆ ಪಂಜಾಬ್ ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಅಲ್ಲಿ ಅವರು ಈಗಾಗಲೇ ಜೈಲಿನಲ್ಲಿದ್ದ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು. ಆತನ ಮೂಲಕ ಮೂವರು ಆರೋಪಿಗಳು ಬಿಷ್ಣೋಯ್ ಗ್ಯಾಂಗ್ ಸೇರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ರಾಜ್ಯಗಳಲ್ಲಿ ಪೊಲೀಸ್ ತನಿಖೆ
ಅಪರಾಧ ವಿಭಾಗದ ತಂಡಗಳನ್ನು ಉಜ್ಜಯಿನಿ (ಮಧ್ಯಪ್ರದೇಶ), ದೆಹಲಿ ಮತ್ತು ಹರಿಯಾಣಕ್ಕೆ ಕಳುಹಿಸಲಾಗಿದೆ. ಸಲ್ಮಾನ್ ಖಾನ್ ಶೂಟಿಂಗ್ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಗುಂಡಿನ ದಾಳಿ ಮಾಡುವ ಮೊದಲು ಇದೇ ರೀತಿಯ ಕಣ್ಗಾವಲುಗಾಗಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಕ್ರೈಂ ಬ್ರಾಂಚ್ ಮೂಲಗಳು ಬಹಿರಂಗಪಡಿಸಿವೆ.

ಲಾರೆನ್ಸ್ ಬಿಷ್ಣೋಯ್ ವಿಚಾರಣೆಗೆ ಸಿದ್ಧತೆ
ಮೂಲಗಳ ಪ್ರಕಾರ ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರನ್ನು ವಿಚಾರಣೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿದವರು ಲಾರೆನ್ಸ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದೃಢೀಕರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್ ಅವರನ್ನು ವಿಚಾರಿಸಬಹುದು. ವಿಚಾರಣೆಗೆ ನ್ಯಾಯಾಲಯದ ಅನುಮತಿ ಅಗತ್ಯವಿರುವುದರಿಂದ ಇದಕ್ಕಾಗಿ ಕಾನೂನು ಸಲಹೆ ಪಡೆಯಲಾಗುತ್ತಿದೆ. ಲಾರೆನ್ಸ್ ಗ್ಯಾಂಗ್‌ನ ಶೂಟರ್‌ಗಳು ಗಿಗಾನಾ ಪಿಸ್ತೂಲ್‌ಗಳನ್ನು ಬಳಸುತ್ತಾರೆ ಎಂಬ ಮಾಹಿತಿ ಹೊರಹೊಮ್ಮಿದೆ. ಬಾಬಾ ಸಿದ್ದಿಕಿ ಹತ್ಯೆಗೆ 9 ಎಂಎಂ ಪಿಸ್ತೂಲ್ ಬಳಸಲಾಗಿದೆ.
ಬಾಬಾ ಸಿದ್ದಿಕಿ ಹತ್ಯೆ
ಮುಂಬೈನ ಬಾಂದ್ರಾ ಪೂರ್ವ ಪ್ರದೇಶದಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಸಮೀಪದಿಂದ ಗುಂಡು ಹಾರಿಸಿದ್ದಾರೆ. ದಾಳಿಕೋರರು ಬಾಬಾ ಸಿದ್ದಿಕಿ ಅವರ ಮಗ ಜೀಶಾನ್ ಅವರ ಕಚೇರಿಯಿಂದ ಹೊರಡುವಾಗ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಬಾಬಾಗೆ ಎರಡು ಗುಂಡುಗಳು ಎದೆ ಹೊಕ್ಕಿವೆ. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಬಾಬಾ ಸಿದ್ದಿಕಿ ಹತ್ಯೆಯ ನಂತರ ಇಡೀ ಮುಂಬೈ ಅಸ್ತವ್ಯಸ್ತವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಾಬಾ ಸಿದ್ದಿಕಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಇದರ ನಂತರ ಅವರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದರು. ಬಾಬಾ ಸಿದ್ದಿಕಿ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಹೆಸರು ಹೊಂದಿದ್ದಾರೆ. 1999, 2004 ಮತ್ತು 2009ರಲ್ಲಿ ಮೂರು ಬಾರಿ ಶಾಸಕರಾಗಿದ್ದರು. 2004 ರಿಂದ 2008 ರವರೆಗೆ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದರು.












Click it and Unblock the Notifications