Snakebite: ಪ್ರತಿ ವರ್ಷ ಹಾವು ಕಡಿತದಿಂದ ದೇಶದಲ್ಲಿ 50,000 ಮಂದಿ ಸಾವು
ನವದೆಹಲಿ, ಜುಲೈ. 29: ದೇಶದಲ್ಲಿ ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು 50,000 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಸೋಮವಾರ ಹೇಳಿದ್ದಾರೆ.
ಪ್ರತಿ ವರ್ಷ, ಭಾರತದಾದ್ಯಂತ 30 ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ ಎಂದು ಸಂಸದ ರಾಜೀವ್ ಪ್ರತಾಪ್ ರೂಡಿ ಲೋಕಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಹಾವು ಕಡಿತದ ಬಗ್ಗೆ ಜನ ಜಾಗೃತರಾಗುವ ಅವಶ್ಯಕತೆಯಿದೆ.

"ಬಿಹಾರ ಅತ್ಯಂತ ಬಡ ರಾಜ್ಯವಾಗಿದೆ, ಬಡತನ ಮತ್ತು ನೈಸರ್ಗಿಕ ವಿಕೋಪಗಳನ್ನು ಸಹಿಸಿಕೊಳ್ಳುತ್ತದೆ. ಭಾರತದಾದ್ಯಂತ, 30 ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಇದರಲ್ಲಿ ಬರೋಬ್ಬರಿ 50,000 ಜನರು ಸಾವನ್ನಪ್ಪುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು" ಎಂದು ಸಂಸದ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದ ಪರಿಸರದಲ್ಲಿ ಹಾವು ಕಡಿತದ ಘಟನೆಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಮೂಲಕ ಅನೇಕ ಸಾವುಗಳನ್ನು ತಡೆಯಬಹುದು ಎಂದು ರಾಜೀವ್ ಪ್ರತಾಪ್ ರೂಡಿ ಒತ್ತಿ ಹೇಳಿದ್ದಾರೆ. ಇದೇ ವೇಳೆ ಹಲವು ಪ್ರಮುಖ ವಿಷಗಳನ್ನು ಚರ್ಚಿಸಲಾಗಿದೆ.
ವೆಲ್ಲೂರು ಸಂಸದ ಎಂ.ಕತಿರ್ ಆನಂದ್ ಅವರು ಬೀಡಿ ಕಾರ್ಮಿಕರ ದುಃಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಬೀಡಿ ಕಾರ್ಮಿಕರಲ್ಲಿ ಹೆಚ್ಚಿನವರು ಮಹಿಳೆಯರು ಎಂದಿರುವ ಅವರು ಕೇಂದ್ರದ ಅಸಮರ್ಪಕ ಅನುದಾನವನ್ನು ಉಲ್ಲೇಖಿಸಿ ಅವರು ಅವರ ವೇತನವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ನೀಡುವಂತೆ ಆಗ್ರಹಿಸಿದ್ದಾರೆ.

ಪಂಜಾಬ್‌ನಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐಸಿಡಿಎಸ್) ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಬಗ್ಗೆ ಬಟಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಕಳವಳ ವ್ಯಕ್ತಪಡಿಸಿದ್ದಾರೆ. ನಕಲಿ ಫಲಾನುಭವಿಗಳು ಖಾಸಗಿ ಸಂಸ್ಥೆಗಳ ಮೂಲಕ ನೆರವು ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಂಜಾಬ್‌ನಲ್ಲಿ ಐಸಿಡಿಎಸ್ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಖಾಸಗಿ ಸಂಸ್ಥೆಗಳ ಮೂಲಕ ನಕಲಿ ಫಲಾನುಭವಿಗಳಿಗೆ ನೆರವು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಗಮನಕ್ಕೆ ತರಲು ನಾನು ಬಯಸುತ್ತೇನೆ ಎಂದಿದ್ದಾರೆ. 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಕೇವಲ 2,200 ರೂಪಾಯಿ ವೇತನ ನೀಡಲಾಗುತ್ತಿದ್ದು, ಇದನ್ನು ಗುಣಮಟ್ಟಕ್ಕಿಂತ ಕೆಳಮಟ್ಟದ್ದು ಎಂದು ಕರೆದಿದ್ದಾರೆ. ಜೊತೆಗೆ ತಾಯಂದಿರು ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವಂತೆ ಹರ್ಸಿಮ್ರತ್ ಕೌರ್ ಒತ್ತಾಯಿಸಿದ್ದಾರೆ.
ತಮಿಳುನಾಡಿನ ಕರೂರ್ ಸಂಸದೆ ಎಸ್ ಜೋತಿಮಣಿ ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಖರೀದಿಸಲು 25 ಲಕ್ಷ ವೆಚ್ಚವಾಗುವುದರಿಂದ ಅದನ್ನು ನಿಭಾಯಿಸಬಲ್ಲವರು ಮಾತ್ರ ನೀಟ್ ಪರೀಕ್ಷೆ ಪಾಸಾಗಬಹುದು ಎಂದು ಆರೋಪಿಸಿದ್ದಾರೆ.
ನೀಟ್ ಪರೀಕ್ಷೆಯಿಂದ ಉಂಟಾದ ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದ ಅವರು, ತಮಿಳುನಾಡಿನಲ್ಲಿ ಕನಿಷ್ಠ 18 ವಿದ್ಯಾರ್ಥಿಗಳು ನೀಟ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್ ಪರಿಚಯಿಸಿದ ನಂತರ ಗ್ರಾಮೀಣ ಪ್ರದೇಶದ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಮತ್ತು ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.












Click it and Unblock the Notifications