Government Employee: ಸರ್ಕಾರಿ ನೌಕರರಿಗೆ 42 ದಿನಗಳ ವಿಶೇಷ ರಜೆ
ನವದೆಹಲಿ, ಏಪ್ರಿಲ್ 03: ಕೇಂದ್ರ ಸರ್ಕಾರಿ ನೌಕರರು 42 ದಿನಗಳ ವಿಶೇಷ ಸಾಂದರ್ಭಿ ರಜೆಯನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. 2023ರಲ್ಲಿ ಕೇಂದ್ರ ಸಹಾಯಕ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿಯೂ ಈ ಕುರಿತು ವಿವರಿಸಲಾಗಿದೆ. ಅಂಗಾಂಗ ದಾನ ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಮಾಧ್ಯಮವಾಗಿದೆ. ಆದ್ದರಿಂದ ಅಂಗಾಂಗ ದಾನ ಮಾಡುವ ನೌಕರರಿಗೆ ಈ ರಜೆ ಲಭಿಸಲಿದೆ.
ಲೋಕಸಭೆ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಬುಧವಾರ ಈ ಕುರಿತು ಉತ್ತರ ನೀಡಿದ್ದಾರೆ. ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರಿ ನೌಕರರು 42 ದಿನಗಳ ಕಾಲ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಲು ಅರ್ಹರು ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ದಾನಿಯ ಅಂಗಾಂಗವನ್ನು ತೆಗೆಯಲು ಶಸ್ತ್ರ ಚಿಕಿತ್ಸೆ ವಿಧಾನ ಯಾವುದೇ ಆಗಿರಲಿ. ಆರ್‌ಎಂಪಿ/ ವೈದ್ಯರ ಶಿಫಾರಸು ಮೇರೆಗೆ ಗರಿಷ್ಠ 42 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. 2023ರಲ್ಲಿಯೇ ಈ ಕುರಿತು ಸಿಬ್ಬಂದಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಅಂಗಾಂಗ ದಾನವನ್ನು ಪ್ರೋತ್ಸಾಹಿಸುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರಿ ನೌಕರರು ಅಂಗಾಂಗ ದಾನ ಮಾಡಿದರೆ ಅವರಿಗೆ ವಿಶೇಷವಾದ ರಜೆಯನ್ನು ನೀಡುತ್ತಿದೆ. ಈ ಕುರಿತು ಲೋಕಸಭೆಯ ಕಲಾಪದಲ್ಲಿಯೇ ಸ್ಪಷ್ಟಪಡಿಸಲಾಗಿದೆ.
ಮನ್ ಕೀ ಬಾತ್‌ನಲ್ಲಿ ಮಾತು: ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್-99ನೇ ಭಾಷಣದಲ್ಲಿಯೂ ಅಂಗಾಂಗ ದಾನದ ಕುರಿತು ಮಾತನಾಡಿದ್ದರು. ಅವರು ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂಥ ಸಾವಿರಾರು ಜನರ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟವರು ಹಲವರಿದ್ದರೆ, ಇನ್ನೂ ಎಷ್ಟೋ ಜನರು ತಮ್ಮ ಜೀವನವದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸಿಬಿಡುತ್ತಾರೆ ಎಂದು ಹೇಳಿದ್ದರು.
ನಮ್ಮ ದೇಶದಲ್ಲಿ ಪರಮಾರ್ಥವನ್ನು ಎಷ್ಟು ಉತ್ತುಂಗದಲ್ಲಿರಿಸಿದ್ದಾರೆ ಎಂದರೆ ಬೇರೆಯವರ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ಬಾಲ್ಯದಿಂದಲೂ ನಮಗೆ ಶಿಬಿ ಮತ್ತು ದಧೀಚಿಯಂತಹ ದೇಹ ದಾನ ಮಾಡಿದವರ ಕಥೆಗಳನ್ನು ಹೇಳುತ್ತಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.
ಈ ಆಧುನಿಕ ವೈದ್ಯ ವಿಜ್ಞಾನದ ಕಾಲಘಟ್ಟದಲ್ಲಿ ಅಂಗಾಂಗ ದಾನ, ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಮಾಧ್ಯಮವಾಗಿದೆ. ಒಬ್ಬ ವ್ಯಕ್ತಿ ಮೃತ್ಯುವಿನ ನಂತರ ತನ್ನ ದೇಹದಾನ ಮಾಡಿದಲ್ಲಿ ಅದರಿಂದ 8-9 ಜನರಿಗೆ ಹೊಸ ಜೀವನ ಲಭಿಸುವ ಸಂಭಾವ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ.
ಇಂದು ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗರೂಕತೆ ಹೆಚ್ಚಾಗುತ್ತಿದೆ ಎಂಬುದು ಸಂತೋಷದ ಸಂಗತಿ. 2013ರಲ್ಲಿ ಅಂಗ ದಾನದ 5000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದವು. ಆದರೆ 2022ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದೆ. ಅಂಗಾಂಗ ದಾನ ಮಾಡುವ ವ್ಯಕ್ತಿ ಮತ್ತು ಅವರ ಕುಟುಂಬ ನಿಜಕ್ಕೂ ಪುಣ್ಯದ ಕೆಲಸ ಮಾಡಿದೆ ಎಂದು ಮೋದಿ ಹೇಳಿದ್ದರು.
ಮೋದಿ ಮನ್ ಕೀ ಬಾತ್‌ನಲ್ಲಿ ಹೆಣ್ಣುಮಗುವಿನ ತಂದೆ ಹಾಗೂ ತಾಯಿಯೊಂದಿಗೆ ಮಾತುಕತೆ ನಡೆಸಿದ್ದರು. ಪಂಜಾಬ್‌ನ ಅಮೃತಸರದಲ್ಲಿರುವ ಸುಖಬೀರ್ ಸಿಂಗ್ ಸಂಧು ಮತ್ತು ಸುಪ್ರೀತಾ ಕೌರ್ ಕುಟುಂಬದ ಜೊತೆ ಮೋದಿ ಮಾತನಾಡಿದ್ದರು. ಈ ದಂಪತಿಗಳ ಪುತ್ರಿ ಅಬಾಬತ್ ಕೌರ್ 39 ದಿನಗಳ ಮಗುವಾಗಿದ್ದಾಗಲೇ ಸಾವನ್ನಪ್ಪಿದ್ದಳು. ಮಗುವಿನ ಅಂಗಾಂಗದಾನ ಮಾಡುವಂತಹ ಅತ್ಯಂತ ಪ್ರೇರಣಾತ್ಮಕ ನಿರ್ಣಯವನ್ನು ದಂಪತಿ ತೆಗೆದುಕೊಂಡರು ಎಂದು ಮೋದಿ ತಿಳಿಸಿದ್ದರು, ದಂಪತಿಗಳ ಕಾರ್ಯವನ್ನು ಶ್ಲಾಘಿಸಿದ್ದರು.












Click it and Unblock the Notifications