ಒಡಿಶಾ ಸಿಎಂ ಆಗಿ ನೇಮಕಗೊಂಡಿರುವ ಮೋಹನ್ ಚರಣ್ ಮಾಝಿ ಯಾರು?
ಇತ್ತೀಚಿಗೆ ಓಡಿಶಾದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಮ್ಯಾಜಿಕ್ ನಂಬರ್ ಸುಲಭವಾಗಿ ಮುಟ್ಟಿದೆ. 147 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದು ಗದ್ದುಗೆಗೆ ಏರಿದೆ. ಈ ಮೂಲಕ ಓಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಹಾಗಿದ್ದರೆ ಓಡಿಶಾ ಸಿಎಂ ಯಾರು ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಉತ್ತರವೂ ಲಭವಿಸಿದೆ.
ಒಡಿಶಾದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಮೋಹನ್ ಚರಣ್ ಮಾಝಿ ಅವರನ್ನು ನೇಮಕ ಮಾಡಿದೆ. ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಝಿ ಅವರ ಹೆಸರನ್ನು ಅನುಮೋದಿಸಲಾಗಿದೆ. ಬಿಜೆಪಿ ಹೈಕಮಾಂಡ್ ಒಡಿಶಾಗೆ ಇಬ್ಬರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿತ್ತು.

ಓಡಿಶಾದ ನೂತನ ಸಿಎಂ ಮೋಹನ್ ಚರಣ್ ಯಾರು?
ಮೋಹನ್ ಚರಣ್ ಮಾಝಿ ಒಡಿಶಾದ ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ಶಾಸಕ. ಅವರು ಬುಡಕಟ್ಟು ಸಮುದಾಯದಕ್ಕೆ ಸೇರಿದವರು. ಈ ಹಿಂದೆ, ಮಾಝಿ ಒಡಿಶಾ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇವರಿಗೆ 52 ವರ್ಷ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೋಹನ್ ಚರಣ್, ಬಿಜೆಡಿಯ ಮೀನಾ ಮಾಝಿ ಅವರನ್ನು 1577 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮೋಹನ್ ಚರಣ್ ಮಾಝಿ 1972 ರಲ್ಲಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ರೈಕಲನ್‌ನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಪಡೆದ ನಂತರ ಸರಪಂಚ್ ಆಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು. ಹಂತ ಹಂತವಾಗಿ ರಾಜಕೀಯ ಮೆಟ್ಟಿಲು ಏರುತ್ತಾ ಸಾಗಿದ ಇವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಕ್ರಮೇಣ ಅವರು ಒಡಿಶಾದಲ್ಲಿ ಬಿಜೆಪಿಯ ಪ್ರಬಲ ಬುಡಕಟ್ಟು ನಾಯಕರಾಗಿ ಗುರುತಿಸಲ್ಪಟ್ಟರು.

ಮೋಹನ್ ಮಾಝಿ ತಮ್ಮ ಸಾರ್ವಜನಿಕ ಸೇವೆ ಮತ್ತು ಸಾಂಸ್ಥಿಕ ಕೌಶಲ್ಯಗಳಿಗೆ ಹೆಸರುವಾಸಿ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಮಾಝಿ ಅವರು ಯುವ ಮತ್ತು ಕ್ರಿಯಾಶೀಲ ಪಕ್ಷದ ಕಾರ್ಯಕರ್ತ ಎಂದು ತಿಳಿಸಿದ್ದಾರೆ, ಅವರು ಹೊಸ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ರಾಜಕೀಯ ಜೀವನ
2000 ರಲ್ಲಿ ಮೊದಲ ಬಾರಿಗೆ ಮೋಹನ್ ಚರಣ್ ಮಾಝಿ ಶಾಸಕರಾದರು. ಒಆರ್‌ವಿ ಕಾಯ್ದೆಯಡಿ ಎಸ್‌ಸಿ ಮತ್ತು ಎಸ್‌ಟಿ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಅವರು 1997 ರಿಂದ 2000 ರವರೆಗೆ ಸರಪಂಚರಾಗಿ ಸೇವೆ ಸಲ್ಲಿಸಿದ್ದರು. ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ಪ್ರಕಾರ, ಮಾಝಿ ಮತ್ತು ಅವರ ಕುಟುಂಬದ ಒಟ್ಟು ಚರ ಮತ್ತು ಸ್ಥಿರ ಆಸ್ತಿ ಮೌಲ್ಯ 1.97 ಕೋಟಿ ರೂ.












Click it and Unblock the Notifications