ಕೊರೊನಾ ವೈರಸ್; ದೇಶದಲ್ಲಿ ಒಂದೇ ದಿನ 43,851 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ನವದೆಹಲಿ, ನವೆಂಬರ್ 16: ದೇಶದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 30,548 ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದೆ. ಇದರಿಂದ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 88,45,127ಕ್ಕೆ ತಲುಪಿದೆ. ಇದು ಕಳೆದ ನಾಲ್ಕು ತಿಂಗಳಿನಲ್ಲಿಯೇ ಅತ್ಯಂತ ಕಡಿಮೆ ದೈನಂದಿನ ಪ್ರಕರಣವಾಗಿದೆ.
ಕಳೆದ 24 ಗಂಟೆಗಳಲ್ಲಿ 435 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,30,070ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಕೂಡ ಗಣನೀಯ ಏರಿಕೆ ಕಂಡಿದೆ. ಒಂದೇ ದಿನ 43,851 ಮಂದಿ ಹೊಸದಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 82,49,579ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,65,478ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಕೆಲವು ವಾರಗಳಿಂದ ಭಾರತದಲ್ಲಿನ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳಲ್ಲಿ ಕೂಡ ಇಳಿಕೆಯಾಗುತ್ತಿರುವುದು ತುಸು ನೆಮ್ಮದಿ ನೀಡಿದೆ.

ಒಂದು ಲಕ್ಷ ಜನಸಂಖ್ಯೆಗೆ ಅತಿ ಕಡಿಮೆ ಕೋವಿಡ್ ಪ್ರಕರಣಗಳನ್ನು ಹೊಂದುತ್ತಿರುವ ದೇಶಗಳಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿ ಮುಂದುವರಿದಿದೆ. 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಪ್ರತಿ ಮಿಲಿಯನ್ ಪ್ರಕರಣಗಳು ವರದಿಯಾಗುತ್ತಿವೆ. ಹಾಗೆಯೇ ದೇಶದಲ್ಲಿ ದಿನದ ಚೇತರಿಕೆ ಪ್ರಮಾಣ ಶೇ 93ಕ್ಕೆ ಏರಿಕೆಯಾಗಿದೆ.
ಈ ನಡುವೆ ಭಾರತದಲ್ಲಿ ಪರೀಕ್ಷಾ ಮಾದರಿಗಳ ಸಂಖ್ಯೆ ಮತ್ತೊಂದು ಹಂತಕ್ಕೆ ಏರಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ನವೆಂಬರ್ 15ರವರೆಗೂ ದೇಶದಲ್ಲಿ 12,56,98,525 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾನುವಾರ ಒಂದೇ ದಿನ 8,61,706 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಭಾನುವಾರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯ ಕೋವಿಡ್ 19 ಪರಿಸ್ಥಿತಿ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಭೆ ನಡೆಸಿದ್ದಾರೆ. 300 ಹೆಚ್ಚುವರಿ ಐಸಿಯು ಹಾಸಿಗೆಗಳ ಲಭ್ಯತೆ, ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಹೆಚ್ಚಳ, ಮನೆಯಿಂದ ಮನೆಗೆ ಸಮೀಕ್ಷೆ ಸೇರಿದಂತೆ ವಿವಿಧ ಕ್ರಮಗಳನ್ನು ಪ್ರಕಟಿಸಿದ್ದಾರೆ.












Click it and Unblock the Notifications